ಬೆಂಗಳೂರು:
ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದ ಹಿಮಾಲಯ ಪ್ರದೇಶದಲ್ಲಿ ಸಿಲುಕಿರುವ ಚಾರಣಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ವಿಶೇಷ ತಂಡವೊಂದನ್ನು ರಚಿಸಿದೆ ಮತ್ತು ಅವರ ಮರಳಿ ಕರೆತರಲು ನೋಡಲ್ ಅಧಿಕಾರಿಯನ್ನು ನೇಮಿಸಿದೆ.
ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಭಾರತ ಸರ್ಕಾರದ ಗೃಹ ಇಲಾಖೆ ನೆರವಿನೊಂದಿಗೆ ಚಾರಣಿಗರನ್ನು ನಾಡಿಗೆ ಕರೆತರಲು ಎಲ್ಲಾ ರಕ್ಷಣಾ ಪ್ರಯತ್ನಗಳನ್ನು ಮುಂದುವರೆಸಲಾಗಿದೆ ಎಂದು ವಿಪತ್ತು ನಿರ್ವಹಣೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಚಾರಣಿಗರ ರಕ್ಷಕರು ಡೆಹರಾಡೂನ್ ತಲುಪುತ್ತಿದ್ದಾರೆ. ಮೃತಪಟ್ಟವರ ವರದಿಗಳನ್ನು ಸಹ ಪಡೆಯುತ್ತಿದ್ದೇವೆ. ಅದನ್ನು ಸ್ಥಳೀಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳೊಂದಿಗೆ ಮರು ದೃಢೀಕರಿಸಲು ಪ್ರಯತ್ನಿಸುತ್ತಿದ್ದೇವೆ. ರಕ್ಷಣಾ ಕಾರ್ಯಾಚರಣೆಗಾಗಿ ಎರಡು ಚೀತಾ ಹೆಲಿಕಾಪ್ಟರ್ ಒಳಗೊಂಡ ಮೂರು ವಾಯುಪಡೆಯ ಹೆಲಿಕಾಪ್ಟರ್, ನಾಲ್ಕು ಹೆಲಿಮೊಬೈಲ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿರುವುದಾಗಿ ಅವರು ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ಇಲಾಖೆಯ ಮಾಹಿತಿ ಪ್ರಕಾರ, ಸುಮಾರು 19 ಚಾರಣಿಗರಿದ್ದಾರೆ, ಅವರೆಲ್ಲರೂ ಬೆಂಗಳೂರಿನಿಂದ ಉತ್ತರಕಾಶಿಯ ಸಹಸ್ತ್ರ ತಾಲ್ ಮಯಕ್ ಸ್ಟ್ರೆಚ್‌ಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ನಿನ್ನೆ ಸಂಜೆ ಉತ್ತರಾಖಂಡ ಡಿಇಒ ಮತ್ತು ಸಿಇಒ ಅವರಿಂದ ಮಾಹಿತಿ ಪಡೆದುಕೊಂಡು, ತಕ್ಷಣವೇ ಅವರನ್ನು ರಕ್ಷಿಸುವ ಕೆಲಸ ಪ್ರಾರಂಭವಾಯಿತು. ಚಾರಣಿಗರು ಖಾಸಗಿ ಏಜೆನ್ಸಿಯ ಮೂಲಕ ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.ವಿಪುಲ್ ಬನ್ಸಾಲ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲು ಸರ್ಕಾರ ಆದೇಶ ಹೊರಡಿಸಿದೆ . ಸಂಕಷ್ಟದಲ್ಲಿ ಸಿಲುಕಿರುವವರನ್ನು ಕರೆತರಲು ಅವರು ಡೆಹರಾಡೂನ್‌ಗೆ ತೆರಳುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.