ಛತ್ತೀಸ್‌ಗಡದಲ್ಲಿ ಭದ್ರತಾ ಪಡೆಗಳಿಂದ ಕಾರ್ಯಾಚರಣೆ; ಇಬ್ಬರು ನಕ್ಸಲರ ಎನ್‌ಕೌಂಟರ್‌

ರಾಯ್ಪುರ್‌:

    ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ನಕ್ಸಲರು  ಹತರಾಗಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಅಭುಜ್‌ಮಾದ್ ಪ್ರದೇಶದ ಕೊಹ್ಕಮೆಟಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಬುಧವಾರ ಸಂಜೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ಮಹಿಳಾ ನಕ್ಸಲ್‌ರನ್ನು ಎನ್‌ಕೌಂಟರ್‌ ಮಾಡಲಾಗಿದೆ.

     ಮಾವೋವಾದಿಗಳ ಮಾಡ್ ವಿಭಾಗದ ಹಿರಿಯ ಕಾರ್ಯಕರ್ತರ ಉಪಸ್ಥಿತಿಯ ಬಗ್ಗೆ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಇಲ್ಲಿಯವರೆಗೆ, ಇಬ್ಬರು ಮಹಿಳಾ ನಕ್ಸಲರ ಮೃತದೇಹಗಳು, ಒಂದು ಇನ್ಸಾಸ್ ರೈಫಲ್ ಮತ್ತು .315 ಬೋರ್ ರೈಫಲ್ ಅನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟಗಳ ಬಳಿಯ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 15 ನಕ್ಸಲರು ಹತರಾದ ಕೇವಲ ಎರಡು ವಾರಗಳ ನಂತರ ಇದು ಸಂಭವಿಸಿದೆ. 

    ಕಳೆದ ತಿಂಗಳು ಪ್ರಮುಖ ನಕ್ಸಲ್ ನಾಯಕ ನಂಬಲ ಕೇಶವ್ ರಾವ್ ಅಲಿಯಾಸ್ ಬಸವ್ ರಾಜ್ ಸೇರಿದಂತೆ 30 ನಕ್ಸಲರನ್ನು ಹೊಡೆದುರುಳಿಸಲಾಗಿತ್ತು. ನಾರಾಯಣಪುರ, ಬಿಜಾಪುರ ಮತ್ತು ದಾಂತೇವಾಡ ಜಿಲ್ಲೆಗಳ ಡಿಆರ್ಜಿ ಸಿಬ್ಬಂದಿ ಭಾಗವಹಿಸಿದ್ದರು. ಏ.21 ರಿಂದ ಮೇ 11 ರ ನಡುವೆ ಛತ್ತೀಸ್‌ಗಢ ಹಾಗೂ ತೆಲಂಗಾಣ ಗಡಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.

   ಕಾರ್ಯಾಚರಣೆಯಲ್ಲಿ ಒಟ್ಟು 214 ನಕ್ಸಲ್ ಅಡಗುತಾಣಗಳನ್ನು ನಾಶಮಾಡಲಾಗಿತ್ತು.ಈ ಕಾರ್ಯಾಚರಣೆಯಲ್ಲಿ ಒಟ್ಟು 450 ಐಇಡಿಗಳು, 818 ಬಿಜಿಎಲ್ ಶೆಲ್‌ಗಳು, 899 ಬಂಡಲ್ ಕೋಡೆಕ್ಸ್, ಡಿಟೋನೇಟರ್‌ಗಳು ಮತ್ತು ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೆ, ಸುಮಾರು 12 ಟನ್ ಆಹಾರ ಸಾಮಾಗ್ರಿಯನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link