ಬೆಂಗಳೂರು
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಇರಿಸು – ಮುರಿಸು ಆಗುವುದು ಸಹಜ. ದೇಶದ ಹಿತ ದೃಷ್ಟಿಯಿಂದ ಪಕ್ಷದ ಕಾರ್ಯಕರ್ತರು ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇಂದಿಲ್ಲಿ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಪ್ರಚಾರ ಮಾಡುವಾಗ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಇರಿಸು ಮುರಿಸಾಗುತ್ತದೆ ಎಂಬುದು ನನಗೆ ಗೊತ್ತಿದೆ. ಕಾರಣ ಹಳೆ ಮೈಸೂರಿನಲ್ಲಿ ಜೆಡಿಎಸ್- ಕಾಂಗ್ರೆಸ್ ನೇರ ಹೋರಾಟದ ಸಂದರ್ಭದಲ್ಲಿ ಅದು ವೈಯುಕ್ತಿಕ ಹೋರಾಟದ ಮಟ್ಟಕ್ಕೂ ಇಳಿದಿತ್ತು. ಕಾರ್ಯಕರ್ತರು ದೇಶದ ಹಿತ ದೃಷ್ಟಿಯಿಂದ ಈ ವೈಯುಕ್ತಿಕ ಸಂಘರ್ಷವನ್ನು ಮರೆತು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಪರ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಉಪಚುನಾವಣೆ ಫಲಿತಾಂಶ ಸಮ್ಮಿಶ್ರ ಸರ್ಕಾರದ ಸಾಧನೆಯ ಅಳತೆಗೋಲಾಗುವ ಜತೆಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಪವಿತ್ರವೋ, ಅಪವಿತ್ರವೋ ಎಂಬುದನ್ನು ನಿರ್ಧರಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಅತ್ಯಂತ ಕಠೋರ ಶಬ್ದಗಳಲ್ಲಿ ಟೀಕೆ ಮಾಡಿದೆ. ಅಪವಿತ್ರ ಮೈತ್ರಿ ಎಂದೆಲ್ಲಾ ಜರಿದಿದ್ದಾರೆ. ಅದಕ್ಕೆಲ್ಲಾ ಜನ ಈ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.
ಈ ಉಪಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದ ಅವರು, ಈ ಉಪಚುನಾವಣೆಯ ಫಲಿತಾಂಶದ ನಂತರವಾದರೂ ಬಿಜೆಪಿ, ಸರ್ಕಾರ ಉರುಳಿಸುವ ವ್ಯರ್ಥ ಕಸರತ್ತನ್ನು ನಿಲ್ಲಿಸುತ್ತದೆ ಎಂಬ ಆಶಾಭಾವನೆಯನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
ಈ ಲೋಕಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಲೋಕಸಭಾ ಚುನಾವಣೆಯ ಬಗ್ಗೆ ಬಿಜೆಪಿ ನಾಯಕರೇ ಅಪಸ್ವರ ಎತ್ತಿದ್ದಾರೆ. ಆದರೂ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಚುನಾವಣೆಗೆ ಸಜ್ಜಾಗಿದ್ದೇವೆ. ಕಾಂಗ್ರೆಸ್ ನಾಯಕರ ಜತೆ ಚರ್ಚೆ ನಡೆಸಿ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಅದರಂತೆ ಮಂಡ್ಯ, ಶಿವಮೊಗ್ಗ ಲೋಕಸಭೆ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರ ಜೆಡಿಎಸ್‍ಗೆ ಬಳ್ಳಾರಿ ಲೋಕಸಭೆ ಮತ್ತು ಜಮಖಂಡಿ ವಿಧಾನಸಭೆ ಕಾಂಗ್ರೆಸ್‍ಗೆ ಎಂದು ತೀರ್ಮಾನವಾಗಿದೆ ಎಂದರು.
ರಾಮನಗರದಲ್ಲಿ ತಮ್ಮ ಪತ್ನಿ ಅನಿತಾಕುಮಾರಸ್ವಾಮಿ ಅವರ ಸ್ಪರ್ಧೆ ನನ್ನ ನಿರ್ಧಾರವಲ್ಲ. ಅದು ಪಕ್ಷ ಹಾಗೂ ಕಾರ್ಯಕರ್ತರ ತೀರ್ಮಾನ. ಹಿಂದೆ ತಾವು ಆ ಕ್ಷೇತ್ರದಿಂದ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ತಮ್ಮ ಕುಟುಂಬುದವರೇ ಸ್ಪರ್ಧೆಗಿಳಿಯಬೇಕು ಎಂದು ಒತ್ತಾಯಿಸಿದ್ದರು. ಅದರಂತೆ ತಮ್ಮ ಪತ್ನಿಯನ್ನು ಕಣಕ್ಕಿಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಂಡ್ಯಾದಲ್ಲೂ ದೇವೇಗೌಡರ ಕುಟುಂಬದ ಮೂರನೇ ಕುಡಿ ಚುನಾವಣೆಗೆ ನಿಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕಾರ್ಯಕರ್ತರ ಆಶಯದಂತೆ ಶಿವರಾಮೇಗೌಡರಿಗೆ ಟಿಕೆಟ್ ನೀಡಲಾಗಿದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ನನ್ನ ಒಡಹುಟ್ಟಿದ ಸಹೋದರನಂತೆ. ಅವರ ತಂದೆ ಬಂಗಾರಪ್ಪನವರು ನನಗೆ ಮಗನ ಪ್ರೀತಿ ನೀಡಿದ್ದರು. ನನ್ನ ಹೋರಾಟದ ಸ್ಪೂರ್ತಿಗೆ ಅವರು ಕಾರಣರು ಎಂದ ಮುಖ್ಯಮಂತ್ರಿಗಳು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧುಬಂಗಾರಪ್ಪನವರ ಸ್ಪರ್ಧೆ ದೇವರ ನಿರ್ಣಯ. ಎಲ್ಲವೂ ದೇವರ ಆಟದಂತೆ ನಡೆಯುತ್ತಿದೆ. ಸೊರಬಾದಲ್ಲಿ ಅವರು ಸೋಲದಿದ್ದರೆ ಅವರು ಈ ಚುನಾವಣೆಯಲ್ಲಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ದೇವರ ಇಚ್ಛೆಯಂತೆ ಎಲ್ಲವೂ ಆಗುತ್ತಿದೆ. ಅವರ ಗೆಲುವು ನಿಶ್ಚಿತ ಎಂದರು.
ಉಪಚುನಾವಣೆಯ ಸಮರದ ನಂತರ ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕುವುದಿಲ್ಲ. ಅಂತಹ ವ್ಯರ್ಥ ಕಸರತ್ತಿಗೆ ಉಪಚುನಾವಣೆಗಳ ಫಲಿತಾಂಶಗಳು ತೆರೆ ಎಳೆಯುತ್ತವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ