ನವದೆಹಲಿ
ವರ್ಕ್ ಮತ್ತು ಲೈಫ್ ಎಷ್ಟು ಬ್ಯಾಲನ್ಸ್ ಇರಬೇಕು ಎನ್ನುವ ಬಗ್ಗೆ ಕಾರ್ಪೊರೇಟ್ ವಲಯದಲ್ಲಿ ಭಿನ್ನ ಅಭಿಪ್ರಾಯಗಳಿವೆ. ಒಳ್ಳೆಯ ಬ್ಯಾಲನ್ಸ್ ಇರಬೇಕು. ಕುಟುಂಬಕ್ಕೂ ಹೆಚ್ಚು ಸಮಯ ಕೊಡಬೇಕು ಎನ್ನುವುದು ಕೆಲವರ ಅನಿಸಿಕೆ. ಆದರೆ ಹೆಚ್ಚಿನ ಸಿಇಒಗಳು ಈ ವರ್ಕ್ ಲೈಫ್ ಬ್ಯಾಲನ್ಸ್ ಥಿಯರಿಯನ್ನು ಒಪ್ಪುವುದಿಲ್ಲ.
ಉದ್ಯೋಗಿಗಳು ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎನ್ನುತ್ತಾರೆ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ವಾರಕ್ಕೆ 70 ಕೆಲಸ ಮಾಡಬೇಕು ಎಂದು ನೀಡಿದ ಹೇಳಿಕೆಯಿಂದ ಭಾರತದಲ್ಲಿ ವರ್ಕ್ ಲೈಫ್ ಬ್ಯಾಲನ್ಸ್ ವಿಚಾರ ಸಾಕಷ್ಟು ಚರ್ಚೆಗೆ ಬಂದಿದೆ. ಒಲಾ ಸಿಇಒ ಭವೀಶ್ ಅಗರ್ವಾಲ್ ಈ ವಿಚಾರದ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ. ಶನಿವಾರ ಮತ್ತು ಭಾನುವಾರ ವಾರದ ರಜೆಗಳು ಎನ್ನುವ ವಿಚಾರವೇ ಭಾರತಕ್ಕೆ ಹೊಸದು. ಇದು ಪಾಶ್ಚಿಮಾತ್ಯ ದೇಶಗಳಿಂದ ಎರವಲಾಗಿ ಬಂದ ಕಾನ್ಸೆಪ್ಟು ಎಂದು ಒಲಾ ಸಿಇಒ ಈ ವಿಡಿಯೋದಲ್ಲಿ ಹೇಳಿದ್ದಾರೆ.
‘ವರ್ಕ್ ಮತ್ತು ಲೈಫ್ ಬ್ಯಾಲನ್ಸ್ ಎನ್ನುವುದು ಸರಿಯಾದ ವಿಚಾರವಲ್ಲ. ಶನಿವಾರ ಮತ್ತು ಭಾನುವಾರ ರಜೆ ಎಂಬುದು ಭಾರತೀಯ ಸಂಗತಿಯಲ್ಲ. ಇದು ಪಶ್ಚಿಮದಿಂದ ಬಂದಿದ್ದು. ಭಾರತದಲ್ಲಿ ಎಂದಿಗೂ ಕೂಡ ಶನಿವಾರ ಮತ್ತು ಭಾನುವಾರ ರಜೆ ಎಂಬುದು ಇರಲಿಲ್ಲ.
‘ನಮ್ಮದು ಚಾಂದ್ರಮಾನ ಕ್ಯಾಲಂಡರ್. ಅದರ ಪ್ರಕಾರ ರಜಾ ದಿನಗಳಿದ್ದವು. ತಿಂಗಳಿಗೆ ಒಂದು ಅಥವಾ ಎರಡು ದಿನ ಮಾತ್ರವೇ ರಜೆಗಳಿದ್ದವು. ಶನಿವಾರ ಅಥವಾ ಭಾನುವಾರ ರಜೆ ಎಂಬುದು ಇರಲಿಲ್ಲ. ಇದು ಪಶ್ಚಿಮದಿಂದ ಆಮದಾಗಿರುವ ವಿಚಾರ.
‘ಕೈಗಾರಿಕಾ ಕ್ರಾಂತಿ ಆದಾಗ ಕಾರ್ಮಿಕರಿಗೆ ಶನಿವಾರ ಮತ್ತು ಭಾನುವಾರ ವಿಶ್ರಾಂತಿ ದಿನಗಳಾದವು. ಈಗಲೂ ಇದು ಜಾರಿಯಲ್ಲಿದೆ. ಆಧುನಿಕ ಯುಗದಲ್ಲಿ ಇವು ಒಪ್ಪುವಂಥದ್ದಲ್ಲ. ಮುಂದಿನ ಕೆಲ ದಶಕಗಳಲ್ಲಿ ಇದು ಇರುವುದಿಲ್ಲ. ವಾರದಲ್ಲಿ ಐದು ದಿನ ಕೆಲಸ, ಉಳಿದ ದಿನ ರಜೆ ಎನ್ನುವ ಕ್ರಮ ಇರುವುದಿಲ್ಲ,’ ಎಂದು ಓಲಾ ಸಿಇಒ ಭವೀಶ್ ಅಗರ್ವಾಲ್ ಹೇಳಿದ್ದಾರೆ.
ಶನಿವಾರ ಮತ್ತು ಭಾನುವಾರದ ರಜೆ ಪಾಶ್ಚಿಮಾತ್ಯದ ಎರವಲು ಎಂದ ಭವೀಶ್ ಅಗರ್ವಾಲ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇವರು ಹಾಕುವ ಡ್ರೆಸ್, ಬಳಸುವ ತಂತ್ರಜ್ಞಾನ, ಮಾತನಾಡುವ ಭಾಷೆ ಎಲ್ಲವೂ ವೆಸ್ಟರ್ನ್ ಎಂದು ಹಲವರು ಕಾಮೆಂಟಿಸಿದ್ದಾರೆ.ನಾಳೆ ದಿನ ಸಂಬಳ ಎನ್ನುವುದೂ ಕೂಡ ಪಾಶ್ಚಿಮಾತ್ಯ ಕಾನ್ಸೆಪ್ಟ್. ಅದರ ಬದಲು ಸಂಜೆ ರೊಟ್ಟಿ ಕೊಡ್ತೀವಿ ತಿನ್ನಿ ಎಂತಲೂ ಹೇಳುತ್ತಾರೇನೋ ಇವರು ಎಂದು ಒಂದು ಕಾಮೆಂಟ್ನಲ್ಲಿ ಹೇಳಲಾಗಿದೆ.