ಮಂಗಳೂರು
ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮಳೆಯ ಜೊತೆಗೆ ಬಿರುಗಾಳಿ ಗುಡುಗು-ಸಿಡಿಲು ಅಬ್ಬರ ಕೂಡ ಜೋರಾಗಿದೆ. ಹೀಗಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಗಳೂರಿನಲ್ಲಿ ಮರ ಬಿದ್ದು ವೃದ್ಧೆ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಗ್ರಾಮದಲ್ಲಿ ನಡೆದಿದೆ. ಬಸವನಮೂಲೆ ನಿವಾಸಿ ಶೇಷಪ್ಪ ಎಂಬವರ ಪತ್ನಿ ಮೀನಾಕ್ಷಿ ಬಸವನಮೂಲೆ (65) ಮೃತ ದುರ್ದೈವಿ.
ಮೀನಾಕ್ಷಿ ಬಸವನಮೂಲೆ ಅವರು ತಮ್ಮ ತೋಟದಲ್ಲಿ ಕಟ್ಟಿದ್ದ ಜಾನುವಾರು ಬಿಡಿಸಿ ತರಲು ಸಂಜೆ ತೆರಳಿದ್ದರು. ಈ ವೇಳೆ ಏಕಾಏಕಿ ಗಾಳಿ ಮಳೆ ಆರಂಭವಾಗಿದ್ದು, ಗಾಳಿ ಮಳೆಯಿಂದ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೀನಾಕ್ಷಿ ಬಸವನಮೂಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಉಡುಪಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಈ ವೇಳೆ ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ. ಸುರೇಶ್ ಶೆಟ್ಟಿ (38) ಸಿಡಿಲು ಬಡಿದು ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿತ್ತು. ಸುರೇಶ್ ಶೆಟ್ಟಿ ಮಳೆ ಬರುವ ವೇಳೆ ಮನೆಯ ಪಕ್ಕ ನಿಂತಿದ್ದರು. ಈ ವೇಳೆ ಏಕಾಏಕಿ ಸಿಡಿಲು ಬಡಿದಿದ್ದು, ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ