ಶ್ರೀನಗರ:
ಭಾರತೀಯ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು. ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ದಿನಾಂಕಗಳನ್ನು ಘೋಷಿಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಶುಕ್ರವಾರ ಇಲ್ಲಿ ಹೇಳಿದರು.
‘ಚುನಾವಣಾ ಆಯೋಗದಿಂದ ನಮಗೆ ಯಾವುದೇ ನಿರೀಕ್ಷೆಗಳಿಲ್ಲ. ಪ್ರಜಾಪ್ರಭುತ್ವವನ್ನು ಕಾಪಾಡುವ ತನ್ನ ಧ್ಯೇಯದ ಭಾಗವಾಗಿ ಚುನಾವಣಾ ಆಯೋಗ ತನ್ನ ಪಾತ್ರವನ್ನು ನಿರ್ವಹಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದು 10 ವರ್ಷಗಳು ಕಳೆದಿವೆ’ ಎಂದು ಅಬ್ದುಲ್ಲಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ‘ಒಂದು ದೇಶ ಒಂದು ಚುನಾವಣೆ’ ಕುರಿತು ವರದಿ ಸಲ್ಲಿಸಿರುವುದನ್ನು ಉಲ್ಲೇಖಿಸಿ, ಜಮ್ಮು ಮತ್ತು ಕಾಶ್ಮೀರದಿಂದ ನೀತಿಯನ್ನು ಪ್ರಾರಂಭಿಸಲು ಇದು ಸುವರ್ಣಾವಕಾಶವಾಗಿದೆ. ಮಾಜಿ ರಾಷ್ಟ್ರಪತಿಗಳು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ವರದಿಯನ್ನು ಸಲ್ಲಿಸಿದ್ದಾರೆ. ನಾವು ಅವರಿಂದ ಏನನ್ನು ನಿರೀಕ್ಷಿಸಬಹುದು.
ನೀವು ಜಮ್ಮು ಮತ್ತು ಕಾಶ್ಮೀರದಿಂದ ಪ್ರಾರಂಭಿಸದಿದ್ದರೆ, ‘ಒಂದು ರಾಷ್ಟ್ರ ಒಂದು ಚುನಾವಣೆ’ ಎಂದು ಡೋಲು ಬಾರಿಸುತ್ತಿರುವುದು ಜನರನ್ನು ಮೂರ್ಖರನ್ನಾಗಿಸಲೇ?. ಇಲ್ಲಿ ಚುನಾವಣೆ ನಡೆಯಬೇಕು ಮತ್ತು ಇದೊಂದು ಸುವರ್ಣಾವಕಾಶ ಎಂದರು.