ಶ್ರೀನಗರ:
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಉಂಟಾಗಿರುವ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಸೋಮವಾರದವರೆಗೆ ಜಮ್ಮು ಮತ್ತು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ವಾಯುದಾಳಿಯ ಎಚ್ಚರಿಕೆ ಸೈರನ್ ಮೊಳಗಿದ ಹಿನ್ನೆಲೆಯಲ್ಲಿ ಮತ್ತು ಪಾಕಿಸ್ತಾನದ ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ ಬಳಿಕ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಜಮ್ಮುವಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ವಾಯುದಾಳಿಯ ಎಚ್ಚರಿಕೆ ಸೈರನ್ ಮತ್ತು ಪಾಕಿಸ್ತಾನದ ಡ್ರೋನ್ ದಾಳಿಯನ್ನು ಭಾರತೀಯ ವಾಯುಸೇನೆ ವಿಫಲಗೊಳಿಸಿದ ಬಳಿಕ ಶುಕ್ರವಾರ ಬೆಳಗ್ಗೆ ಜಮ್ಮುವಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನಗರದ ಪರಿಸ್ಥಿತಿಯನ್ನು ಪರಿಶೀಲಿಸಿ ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಖ್ನೂರ್, ಸಾಂಬಾ, ಬಾರಾಮುಲ್ಲಾ ಮತ್ತು ಕುಪ್ವಾರಾ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವಾರು ನಗರಗಳ ಮೇಲೆ ಗುರುವಾರ ರಾತ್ರಿ ಪಾಕಿಸ್ತಾನ ಡ್ರೋನ್ ದಾಳಿಯ ಪ್ರಯತ್ನ ಮಾಡಿದೆ. ಆದರೆ ಭಾರತೀಯ ಸೇನೆ ಇದನ್ನು ವಿಫಲಗೊಳಿಸಿದೆ. ಅನಂತರ ಪರಿಸ್ಥಿತಿಯನ್ನು ಪರಿಶೀಲಿಸಲು ಜಮ್ಮುವಿಗೆ ಭೇಟಿ ನೀಡುತ್ತಿರುವುದಾಗಿ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಜಮ್ಮುವಿನ ವಿವಿಧ ಭಾಗಗಳಲ್ಲಿ ಗುರುವಾರ ರಾತ್ರಿಯಿಡಿ ಸೈರನ್‌ಗಳು ಮೊಳಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಅಬ್ದುಲ್ಲಾ ಅವರು ಜಮ್ಮುವಿಗೆ ಭೇಟಿ ನೀಡಿದ್ದಾರೆ. ಜಮ್ಮು ಮತ್ತು ಪಠಾಣ್‌ಕೋಟ್ ಸೇರಿದಂತೆ ಹಲವಾರು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲು ಉದ್ದೇಶಿಸಲಾದ ಪಾಕಿಸ್ತಾನದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಭಾರತೀಯ ಸೇನೆ ತಡೆದಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಶಾಲೆಗಳು ಸೋಮವಾರದವರೆಗೆ ಮುಚ್ಚಲು ಆದೇಶಿಸಲಾಗಿದೆ. ಸೋಮವಾರ ಮತ್ತು ಅನಂತರ ಶಾಲೆಗಳನ್ನು ಮುಚ್ಚುವ ನಿರ್ಧಾರದ ಬಗ್ಗೆ ರಾಜ್ಯ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಅಬ್ದುಲ್ಲಾ ತಿಳಿಸಿದ್ದಾರೆ.
ಪರಿಸ್ಥಿತಿಗಳ ಆಧಾರದಲ್ಲಿ ಯಾವಾಗ ಶಾಲೆ ತೆರೆಯಬಹುದು ಎನ್ನುವುದನ್ನು ಮುಂದೆ ನಿರ್ಧರಿಸಲಾಗುತ್ತದೆ. ಸೋಮವಾರ ಮಧ್ಯಾಹ್ನದೊಳಗೆ ಈ ನಿರ್ಧಾರವನ್ನು ಪರಿಶೀಲಿಸಲಾಗುತ್ತದೆ. ಪರಿಸ್ಥಿತಿಯ ಆಧಾರದಲ್ಲಿ ಶಾಲೆಗಳನ್ನು ಮುಚ್ಚುವುದನ್ನು ವಿಸ್ತರಿಸಬೇಕೆ ಅಥವಾ ಬೇಡವೇ ಮತ್ತು ವಿಸ್ತರಿಸಿದರೆ ಎಷ್ಟು ಸಮಯದವರೆಗೆ ಎಂಬುದರ ಕುರಿತು ನಿರ್ಧರಿಸಲಾಗುವುದು ಎಂದು ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಶಿಕ್ಷಣ ಸಚಿವೆ ಸಕಿನಾ ಇಟೂ ಅವರು ಗುರುವಾರ ಎರಡು ದಿನಗಳ ಕಾಲ ರಾಜ್ಯದ ಶಾಲೆಗಳನ್ನು ಮುಚ್ಚುವುದಾಗಿ ಆದೇಶಿಸಿದ್ದರು.
