ಓಮಿಕ್ರಾನ್ ಆತಂಕ ಸದ್ಯಕ್ಕೆ ದೂರ

ಬೆಂಗಳೂರು:

ಓಮಿಕ್ರಾನ್ ಆತಂಕದಲ್ಲಿ ಮುಳುಗಿದ್ದ ರಾಜ್ಯಕ್ಕೆ ಇದೀಗ ಸಮಾಧಾನ ಪಡುವಂತಹ ಸಂಗತಿ ಬಹಿರಂಗವಾಗಿದ್ದು ಈಗ ಪತ್ತೆಯಾಗಿರುವ ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಯಾರಿಗೂ ಅದು ಹರಡಿಲ್ಲ. ಸುದ್ದಿಗಾರರ ಜತೆ ಮಾತನಾಡಿದ ಆರೋಗ್ಯ ಸಚಿವ ಡಾ.ಡಿ.ಸುಧಾಕರ್ ಈ ವಿಷಯ ತಿಳಿಸಿದರಲ್ಲದೆ ರಾಜ್ಯದಲ್ಲಿ ಪತ್ತೆಯಾದ ಇಬ್ಬರು ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಯಾರಿಗೂ ಅದು ಹರಡಿಲ್ಲ ಎಂದು ವಿವರಿಸಿದರು.

ಸೋಂಕಿತರ ಸಂಪರ್ಕದಲ್ಲಿದ್ದವರೆಲ್ಲರೂ ಎರಡನೇ ಡೋಸ್ ಲಸಿಕೆ ಪಡೆದುಕೊಂಡವರು. ಇದನ್ನು ಗಮನದಲ್ಲಿಟ್ಟುಕೊಂಡರೆ ಓಮಿಕ್ರಾನ್ ಅಪಾಯಕಾರಿ ತಳಿ ಅಲ್ಲ. ವಸ್ತುಸ್ಥಿತಿ ಎಂದರೆ ಈ ಮುನ್ನ ಶುರುವಾಗಿದ್ದ ಡೆಲ್ಟಾ ತಳಿ ತುಂಬ ಅಪಾಯಕಾರಿ. ಆದರೆ ಅದನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಹೀಗಾಗಿ ಓಮಿಕ್ರಾನ್ ಅನ್ನು ಧೈರ್ಯವಾಗಿ ಎದುರಿಸುವ ವಿಶ್ವಾಸವಿದೆ. ಓಮಿಕ್ರಾನ್ ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಂಡಿದ್ದರೂ ಅದರ ಪರಿಣಾಮವೇನೂ ಆತಂಕಕಾರಿಯಲ್ಲ. ಎರಡು ಡೋಸ್ ಲಸಿಕೆ ತೆಗೆದುಕೊಂಡವರಲ್ಲಿ ಇದರ ಪರಿಣಾಮವಂತೂ ಅತ್ಯಂತ ಕಡಿಮೆ. ಹೀಗಾಗಿ ರಾಜ್ಯದ ಜನ ಆತಂಕಪಡುವ ಅಗತ್ಯವಿಲ್ಲ ಎಂದರು.

ಆದರೆ ಓಮಿಕ್ರಾನ್ ವಿಷಯದಲ್ಲಿ ಮುಂಜಾಗರೂಕತೆ ಇರಲಿ. ಕೋವಿಡ್ ಬಂದ ನಂತರ ಯಾವ ಮುನ್ನೆಚ್ಚರಿಕೆಗಳನ್ನು ವಹಿಸಿದ್ದೇವೋ ಅದು ಮುಂದುವರಿಯಲಿ ಎಂದು ಇದೇ ಸಂದರ್ಭದಲ್ಲಿ ಅವರು ನುಡಿದರು. ಒಮಿಕ್ರಾನ್ ದೇಶದ ಕೆಲ ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಸೋಂಕಿನ ಪರಿಣಾಮಗಳು ತೀವ್ರವಾಗಿಲ್ಲ. ರಾಜ್ಯದಲ್ಲಿ ಈಗಾಗಲೇ ಪತ್ತೆಯಾಗಿರುವ ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ ಬೇರೆ ಪ್ರಕರಣಗಳು ಪತ್ತೆಯಾಗಿಲ್ಲ ಎಂದರು.

ಪ್ರತಿಯೊಬ್ಬರೂ ಎರಡು ಡೋಸ್ ಲಸಿಕೆ ಪಡೆಯುವುದು ಬಹಳ ಮುಖ್ಯ. ಒಂದು ಡೋಸ್ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುವುದಿಲ್ಲ ಎಂದ ಅವರು, ಈಗ ರಾಜ್ಯದಲ್ಲಿ ಶೇಕಡಾ ತೊಂಭತ್ಮೂರರಷ್ಟು ಜನ ಮೊದಲ ಡೋಸ್ ಪಡೆದಿದ್ದಾರೆ. ಅರವತ್ನಾಲ್ಕರಷ್ಟು ಜನ ಎರಡನೇ ಡೋಸ್ ಪಡೆದಿದ್ದಾರೆ. ಈಗ ರಾಜ್ಯದಲ್ಲಿ ಎಪ್ಪತ್ತು ಲಕ್ಷದಷ್ಟು ಲಸಿಕೆ ಇದೆ. ಹೀಗಾಗಿ ಲಸಿಕೆಗೆ ಯಾವ ಕೊರತೆಯೂ ಇಲ್ಲ. ಪಡೆಯುವ ವಿಷಯದಲ್ಲಿ ಜನ ಆಸಕ್ತಿ ವಹಿಸಬೇಕು ಎಂದು ನುಡಿದರು.

ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿಬಂಧಿಸುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಷಯ. ಓಮಿಕ್ರಾನ್ ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಲಿದೆ ಎಂಬುದರ ಆಧಾರದ ಮೇಲೆ ಅದು ತೀರ್ಮಾನ ಕೈಗೊಳ್ಳಲಿದೆ ಎಂದರು.

 

Recent Articles

spot_img

Related Stories

Share via
Copy link
Powered by Social Snap