ಒಂದೇ ದಿನ 5 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು
ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ಸೋಂಕು ಅಮೆರಿಕದಾದ್ಯಂತ ತೀವ್ರ ವ್ಯಾಪಿಸುತ್ತಿದ್ದು, ಕೋವಿಡ್-19 ದೃಢಪಟ್ಟ ಹೊಸ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. 24 ಗಂಟೆಗಳ ಅಂತರದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ
ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಮಾಹಿತಿಯ ಪ್ರಕಾರ, ಕೊರೊನಾ ವೈರಸ್ ಸಾಂಕ್ರಾಮಿಕದ ಶುರುವಿನಿಂದ ಇದೇ ಮೊದಲ ಬಾರಿಗೆ ಒಂದು ದಿನದ ಅಂತರದಲ್ಲಿ ದಾಖಲಾಗಿರುವ ಅತಿ ಹೆಚ್ಚು ಪ್ರಕರಣಗಳು ಇದಾಗಿದೆ.
24 ಗಂಟೆಗಳ ಅಂತರದಲ್ಲಿ (ಸೋಮವಾರ) 5,12,553 ಪ್ರಕರಣಗಳು ದಾಖಲಾಗಿದ್ದು, 1,762 ಮಂದಿ ಮೃತಪಟ್ಟಿದ್ದಾರೆ. ಕಳೆದ ಒಂದು ವಾರಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, 10,000 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ.
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ (ಸಿಡಿಸಿ) ಮಾಹಿತಿಯ ಪ್ರಕಾರ, ನಿತ್ಯ ದಾಖಲಾಗುವ ಹೊಸ ಪ್ರಕರಣಗಳ ಏಳು ದಿನಗಳ ಸರಾಸರಿಯು ಭಾನುವಾರದಂದು 2,06,000 ತಲುಪಿತ್ತು.
ಅಮೆರಿಕದಲ್ಲಿ ಮೊದಲ ಓಮೈಕ್ರಾನ್ ಸೋಂಕು ಪ್ರಕರಣ ಡಿಸೆಂಬರ್ 1ರಂದು ಪತ್ತೆಯಾಗಿತ್ತು. ಅನಂತರದಲ್ಲಿ ದೇಶದ ಹಲವು ಭಾಗಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್-19 ಒಟ್ಟು ಪ್ರಕರಣಗಳ ಸಂಖ್ಯೆ ತೀವ್ರ ಏರುಗತಿಯಲ್ಲಿದೆ.
ಸಿಡಿಸಿ ಪ್ರಕಾರ, ಅಮೆರಿಕದಲ್ಲಿ ದಾಖಲಾಗುತ್ತಿರುವ ಹೊಸ ಪ್ರಕರಣಗಳ ಪೈಕಿ ಶೇಕಡ 58.6ರಷ್ಟು ಓಮೈಕ್ರಾನ್ ಪ್ರಕರಣಗಳಾಗಿವೆ. ಡೆಲ್ಟಾ ರೂಪಾಂತರ ತಳಿಗಿಂತಲೂ (ಶೇ 41.1ರಷ್ಟು) ಓಮೈಕ್ರಾನ್ ಸೋಂಕು ಏರಿಕೆಯಾಗಿದೆ.
ಸಂಚಾರ ನಿರ್ಬಂಧಗಳು, ಕ್ರೀಡೆ ಹಾಗೂ ಇತರೆ ಕಾರ್ಯಕ್ರಮಗಳ ನಿಷೇಧದ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಜನರ ಸಂಖ್ಯೆಯೂ ಹೆಚ್ಚಳವಾಗಿದೆ.
ಸೋಂಕಿಗೆ ಒಳಗಾಗುತ್ತಿರುವ ಮಕ್ಕಳ ಸಂಖ್ಯೆಯೂ ಏರಿಕೆಯಾಗಿದೆ. ಈವರೆಗೂ ಅಮೆರಿಕದಲ್ಲಿ 75 ಲಕ್ಷ ಮಕ್ಕಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ