ಕಾಂಗ್ರೆಸ್ ಪಕ್ಷ ಬಡವರ ಪರ-ಬಿಜೆಪಿ ಕಾರ್ಪೊರೇಟರ್‍ಗಳ ಪರ

ಕೊರಟಗೆರೆ:

ವಿಧಾನಪರಿಷತ್ ಚುನಾವಣಾ ಪ್ರಚಾರದಲ್ಲಿ ಶಾಸಕ ಡಾ.ಜಿ.ಪರಮೇಶ್ವರ ವಾಗ್ದಾಳಿ

   ಕಾಂಗ್ರೆಸ್ ಪಕ್ಷವು ರಾಜೀವ್‍ಗಾಂಧಿ ಪ್ರಧಾನಿ ಕಾಲದಲ್ಲಿ ಗ್ರಾಮ ಸ್ವರಾಜ್ ಜಾರಿಗೆ ತಂದು ಅಧಿಕಾರ ವಿಕೇಂದ್ರಿಕರಣ ಮಾಡಿ ಮಹಿಳೆಯರಿಗೆ ವಿಶೇಷ ಮೀಸಲಾತಿ ನೀಡಿ, ಗ್ರಾಮ ಪಂಚಾಯತಿಯನ್ನು ಶಕ್ತಿಯುತ ಗೊಳಿಸಿದೆ. ಅದಕ್ಕಾಗಿ ಗ್ರಾಮ ಪಂಚಾಯಿತಿ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯನ್ನು ವಿಧಾನಪರಿಷತ್ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಅವರು ತಾಲ್ಲೂಕಿನ ಪ್ರಸಿದ್ದ ಗೊರವನಹಳ್ಳಿ ಯಾತ್ರಾಸ್ಥಳದ ಕಮಲಪ್ರಿಯ ಕಲ್ಯಾಣಮಂಟಪದಲ್ಲಿ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರ ಪರ ಮತ ಯಾಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷವು ಸದಾ ಗ್ರಾಮೀಣ ಜನರ, ಬಡವರ, ಹಿಂದುಳಿದ, ದಲಿತರ, ರೈತರ ಪರ ಇರುವ ಪಕ್ಷ. ಬಿಜೆಪಿ ಪಕ್ಷವು ಕಾರ್ಪೊರೇಟರ್‍ಗಳ ಪರವಿರುವ ಪಕ್ಷ. ಬಿಜೆಪಿ ಅಧಿಕಾರ ವಿಕೇಂದ್ರಿಕರಣ ಮತ್ತು ಗ್ರಾಮ ಪಂಚಾಯತ್ ಸಬಲೀಕರಣದ ವಿರುದ್ದ ಇದ್ದು, ಆಶ್ರಯ ಯೋಜನೆ ಮನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ನರೇಗಾ ಯೋಜನೆಯನ್ನು ಸಮಗ್ರವಾಗಿ ನಡೆಸುತ್ತಿಲ್ಲ. ಅತಿವೃಷ್ಟಿಯಿಂದ ರಾಜ್ಯದಲ್ಲಿ 11 ಲಕ್ಷ ಎಕರೆಯ ಬೆಳೆ ಹಾನಿಯಾಗಿದೆ. ಲಕ್ಷಾಂತರ ಮನೆ ಬಿದ್ದಿವೆ. ಇಲ್ಲಿಯವರೆಗೆ ಸಣ್ಣ ಪರಿಹಾರ ನೀಡದ ಬಿಜಿಪಿಗೆ ಮತ ಕೇಳುವ ಹಕ್ಕಿಲ್ಲ, ಇನ್ನು ಜೆಡಿಸ್ ಪಕ್ಷ ಕೆಲವೆ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದು, ಉಳಿದ ಕಡೆ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ. ಇದರ ಬಗ್ಗೆ ಮತದಾರರೆ ಯೋಚಿಸಬೇಕು ಎಂದರು.

ಮಾಜಿ ಪ್ರಧಾನಿ ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ದೆಹಲಿಯ ಕಾಂಗ್ರೆÀ್ರಸ್ ಹೈಕಮಾಂಡ್ ಜೊತೆ ಸಮಾಲೋಚಿಸಿ, ಅವರೇ ಸ್ವಯಂ ನಿರ್ಧಾರದಿಂದ ಬಂದರು. ಪಕ್ಷದ ಯಾವ ನಾಯಕರೂ ಅವರನ್ನು ತುಮಕೂರಿಗೆ ಕರೆಯಲಿಲ್ಲ, ಆದರೆ ಹೈಕಮಾಂಡ್ ನಿರ್ಧಾರಕ್ಕೆ ಒಪ್ಪಿ ಅವರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ, ನಿಷ್ಠೆಯಿಂದ ಕೆಲಸ ಮಾಡಿದ್ದೇವೆ.

ಅವರು ಸೋತರೆ ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ದೂರುವುದು ಸರಿಯೆ? ಅವರ ಸೋಲಿಗೆ ಜೆಡಿಎಸ್‍ನವರು ಕಾರಣರು. ಅತಿ ಕಡಿಮೆ ಸಂಸದರನ್ನು ಹೊಂದಿದ್ದ ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆÀ್ರಸ್ ಪಕ್ಷ. 38 ವಿಧಾನ ಸಭಾ ಸದಸ್ಯರನ್ನು ಹೊಂದಿದ್ದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಎನ್ನುವುದನ್ನು ಮರೆಯಲೇಬಾರದು ಎಂದ ಅವರು, ಆರ್.ರಾಜೇಂದ್ರ ಅವರು ಪಕ್ಷದ ಒಮ್ಮತದ ಅಭ್ಯರ್ಥಿ, ಸ್ಥಳೀಯರು, ಎಲ್ಲರಿಗೂ ಚಿರಪರಿಚಿತರು. ಸಾಮಾಜಿಕ ಸೇವೆಯಲ್ಲಿ ರೈತರ, ಬಡವರ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಉತ್ಸಾಹಿ ಯುವಕ. ಇವರಿಗೆ ಇನ್ನಷ್ಟು ಶಕ್ತಿ ನೀಡಲು ಕೊರಟಗೆರೆ ಕ್ಷೇತ್ರ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ ಆರ್.ರಾಜೇಂದ್ರ ಸ್ಥಳೀಯರು, ಕ್ರಿಪ್ಕೋ, ಡಿಸಿಸಿ, ಟಿಎಪಿಸಿಎಂಸ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂತಹವರಿಗೆ ಮತ ನೀಡಿದರೆ ಮತದಾರಿಗೆ ಉತ್ತಮ ಸೇವೆ ದೊರೆಯವುದು ಎಂದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಬಿಜೆಪಿ ಜೆಡಿಎಸ್ ಒಂದೆ. ಅವರಿಗೆ ಮತ ಯಾಚನೆ ಮಾಡುವ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ ಪಕ್ಷ ಒಂದೆ ಬಡವರಿಗಾಗಿ, ಜನರ ಒಳಿತಿಗಾಗಿ ಶ್ರಮಿಸುವ ಪಕ್ಷವಾಗಿದೆ. ಆರ್.ರಾಜೇಂದ್ರರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಶಾಸಕ ವೆಂಕಟರವಣಪ್ಪ ಮಾತನಾಡಿ, ದೇವೇಗೌಡ, ಕುಮಾರಸ್ವಾಮಿಯವರದು ಕಣ್ಣೀರಿನ ನಾಟಕದ ರಾಜಕೀಯ. ಅವರ ಸಹವಾಸ ಮಾಡಿ 16 ರಿಂದ 20 ಲೋಕಸಭಾ ಕ್ಷೇತ್ರ ಗೆಲ್ಲುತ್ತಿದ್ದ ಕಾಂಗ್ರೆಸ್ ಒಂದಕ್ಕೆ ಬಂದಿತು. ಬಿಜೆಪಿ ಭ್ರಷ್ಟರ ಪಕ್ಷ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದರು.

ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಕಾಂಗ್ರೆÀ್ರಸ್ ಪಕ್ಷದ ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆ ಬಡವರನ್ನು ಇಂದಿಗೂ ಹಸಿವಿನಿಂದ ದೂರವಿರಿಸಿದೆ. ಸಿದ್ದರಾಮಯ್ಯ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ 800 ಕೋಟಿ ರೂ. ಸಾಲ ಮನ್ನಾ ಮಾಡಿದೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‍ನಿಂದ ನ್ಯಾಯ ಸಾಧ್ಯ. ಬಿಜೆಪಿ ಪಕ್ಷ ಅದನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಯಡಿಯೂರಪ್ಪರವರಿಗೆ ಕಣ್ಣೀರು ಹಾಕಿಸಿದೆ. ಪ್ರಜ್ವಲ್‍ರೇವಣ್ಣ ಹೇಳಿದ ಹಾಗೆ ಜೆಡಿಎಸ್‍ನಲ್ಲಿ ಸೂಟ್‍ಕೇಸ್ ಇದ್ದರೆ ಮುಂದಿನ ಆಸನ. ಇಬ್ಬರೂ ಅಭ್ಯರ್ಥಿಗಳು ಹೊರಗಿನವರೆ. ಆರ್.ರಾಜೇಂದ್ರ ಸ್ಥಳೀಯರು, ಅವರಿಗೆ ಮತ ನೀಡಿ ಎಂದು ಕೋರಿದರು. ಅಭ್ಯರ್ಥಿ ಆರ್.ರಾಜೇಂದ್ರ ಮಾತನಾಡಿ, ಜಿಲ್ಲೆಯ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರ ಶ್ರಮದಿಂದ ಹೆಚ್ಚಿನ ಮತ ಬೀಳಲಿದ್ದು, ತಮ್ಮ ಜನಪರ ಕೆಲಸಗಳನ್ನು ಗಮನಿಸಿ ಮತ ಹಾಕುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಷಫಿಅಹಮದ್, ಷಡಾಕ್ಷರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆಶಂಕರ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಮಹಿಳಾ ಅಧ್ಯಕ್ಷ್ಷರುಗಳಾದ ಜಯಮ್ಮ, ಶೈಲಜ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಮುಖಂಡರುಗಳಾದ ಜಿ.ವೆಂಕಟಾಚಲಯ್ಯ, ವಾಲೆ ಚಂದ್ರಯ್ಯ, ಈಶ್ವರಯ್ಯ, ಎ.ಡಿ.ಬಲರಾಮಯ್ಯ, ಚಂದ್ರಶೇಖರ್‍ಗೌಡ, ಹುಲೀಕುಂಟೆ ಪ್ರಸಾದ್, ಎಲ್.ರಾಜಣ್ಣ, ಓಬಳರಾಜು, ಪ್ರಸನ್ನಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link