ಮಧುಗಿರಿ :
ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರೈತಪರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಅವರು ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯಲ್ಲಿ ನೂತನ ಗ್ರಾಪಂ ಕಟ್ಟಡ ಉದ್ಘಾಟನೆ, ಸತ್ತಿಗೇನಹಳ್ಳಿ ಹಾಗೂ ಬೆನಕನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಮತ್ತು ಅಂಬೇಡ್ಕರ್ ಭವನದ ಭೂಮಿ ಪೂಜೆ ಹಾಗೂ ಲಕ್ಲಿಹಟ್ಟಿಯಲ್ಲಿ ಸೇತುವೆ ಕಾಮಗಾರಿ, ಕಡಗತ್ತೂರಿನಲ್ಲಿ ಸೇತುವೆ ನಿರ್ಮಾಣ ಒಟ್ಟು 1.20 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪಂಚರತ್ನ ಯೋಜನೆ ಅನುಷ್ಠಾನಗೊಂಡರೆ ನಾಡಿನ ಜನರಿಗೆ ಭಾರಿ ಅನುಕೂಲವಾಗಲಿದೆ. ನಾಡಿನ ಬಡವರು ಸಂಕಷ್ಟದಲ್ಲಿ ಇರುವುದರಿಂದ ಸಮಸ್ಯೆಗಳನ್ನು ಮನಗಂಡ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಹಾಗೂ ಪಂಚರತ್ನ ಯೋಜನೆಯ ಮೂಲಕ ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದ್ದಾರೆ ಎಂದರು.
ಇದರಂತೆ 1 ರಿಂದ 12ನೆ ತರಗತಿಯವರೆಗೂ ಉಚಿತ ಶಿಕ್ಷಣ, ಆರೋಗ್ಯ ಸೇವೆ, ಸ್ವಕ್ಷೇತ್ರದಲ್ಲೇ ಉದ್ಯೋಗ, ಉಚಿತವಾಗಿ ಮನೆ ನಿರ್ಮಾಣ, ವಿಧವೆಯರಿಗೆ ಮಾಸಿಕ 2500 ರೂ. ಹಾಗೂ ವೃದ್ಧರಿಗೆ 5 ಸಾವಿರ ಮಾಸಾಶನ, ರೈತರಿಗಾಗಿ ಚೈತನ್ಯ ಯೋಜನೆಯನ್ನು ನೀಡುವುದಾಗಿ ಘೋಷಿಸಿದ್ದಾರೆ. ಇವುಗಳೆಲ್ಲವೂ ಜಾರಿಯಾಗಬೇಕಾದರೆ ಜೆಡಿಎಸ್ ಪಕ್ಷಕ್ಕೆ ಕನಿಷ್ಠ 123 ಶಾಸಕರ ಬಲದ ಅಗತ್ಯವಿದೆ. ರಾಜ್ಯಾದ್ಯಂತ ಸಂಚರಿಸಿ ಮತದಾರರಲ್ಲಿ ಮನವಿ ಮಾಡುತ್ತಿದ್ದು, ಜನರಿಂದ ವ್ಯಾಪಕ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಲ್ಲಿ ಮತ್ತೊಮ್ಮೆ ತಮಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ತಮ್ಮ ಅವಧಿಯ ಮೊದಲ ವರ್ಷದಲ್ಲಿ 6 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಮೇವನ್ನು ವಿತರಿಸಿದೆ. ತಾಲ್ಲೂಕಿನ ರೈತರ 1 ರಿಂದ 2 ಲಕ್ಷವರೆಗಿನ ಸಾಲವನ್ನು ಮನ್ನಾ ಮಾಡಿದ ಕುಮಾರಸ್ವಾಮಿ ಸರ್ಕಾರವನ್ನು ಕುತಂತ್ರದಿAದ ಬೀಳಿಸಲಾಯಿತು. ನಂತರ 2 ವರ್ಷ ಕೊರೋನಾ ಭಯದಿಂದ ಬಿಜೆಪಿ ಸರ್ಕಾರ ಅನುದಾನ ನೀಡವುದನ್ನೇ ನಿಲ್ಲಿಸಿ ತಾರತಮ್ಯ ಮಾಡಿತು. ಅಧಿಕಾರಿಗಳ ಸಹಕಾರದಿಂದ ಇಲ್ಲಿಯವರೆಗೂ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಸವರಾಜು, ತಾ.ಪಂ. ಇಓ ಲಕ್ಷಣ್, ಗ್ರಾ.ಪಂ. ಅಧ್ಯಕ್ಷೆ ನಾಗಮ್ಮ, ಪ್ರೇಮಲತಾ, ಉಪಾಧ್ಯಕ್ಷೆ ಮಂಜುಳಾ, ಮುಖಂಡರಾದ ದತ್ತಣ್ಣ, ಮಂಜಣ್ಣ, ಪಿಡಿಓ ರಜನಿ, ಹೊನ್ನೇಶ್, ಸದಸ್ಯರು, ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
