ಬೆಂಗಳೂರು:
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದ್ದಾರೆ. ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿರುವ ವಿರಾಟ್ ಕೊಹ್ಲಿ ಮಾಲೀಕತ್ವದ ದಿ ಒನ್ 8 ಕಮ್ಯೂನ್ ಪಬ್‌ನಲ್ಲಿ ಪ್ರತ್ಯೇಕ ಸ್ಥಳ ಮೀಸಲಿಡದೆ ಗ್ರಾಹಕರಿಗೆ ಧೂಮಪಾನಕ್ಕೆ (Smoking) ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ಮೇ 29ರಂದು ಪೊಲೀಸರು ದಾಳಿ ಮಾಡಿ ಎನ್ಸಿಆರ್ ದಾಖಲು ಮಾಡಿಕೊಂಡಿದ್ದರು. ಈಗ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.
ದಿ ಒನ್ 8 ಕಮ್ಯೂನ್ ಪಬ್ನಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ಮೀಸಲು ಇಡದಿರುವುದಕ್ಕೆ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ಅನುಮತಿ ನೀಡಿರುವ ಅವಧಿ ಮೀರಿ ಪಬ್ ನಡೆಸಲಾಗುತ್ತಿದೆ ಎಂದು ಪ್ರಕರಣ ದಾಖಲಾಗಿತ್ತು.ಬೆಂಗಳೂರಿನಲ್ಲಿ ಒನ್8 ಕಮ್ಯೂನ್ ಪಬ್ ಡಿಸೆಂಬರ್ 2023ರಲ್ಲಿ ಪ್ರಾರಂಭವಾಯಿತು. ಇದು ದಿಲ್ಲಿ, ಮುಂಬಯಿ, ಪುಣೆ ಮತ್ತು ಕೋಲ್ಕತ್ತಾದಂತಹ ಇತರ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.