33 ಸೆಕೆಂಡ್ ನಲ್ಲಿ 33 ಲಕ್ಷ ಹಣ ಕಳ್ಳತನ – ಓರ್ವ ಆರೋಪಿ ಅರೆಸ್ಟ್

ಹಾವೇರಿ:

     ಕಾರಿನ ಗಾಜು ಒಡೆದು 33 ಸೆಕೆಂಡ್‌ನಲ್ಲಿ 33 ಲಕ್ಷ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ

     ಆಂಧ್ರಪ್ರದೇಶ ಮೂಲದ ಎ.ಜಗದೀಶ್ (28) ಬಂಧಿತ ಆರೋಪಿ. ಕಳೆದ ನಾಲ್ಕು ದಿನಗಳ ಹಿಂದೆ ಕಾರಿನ ಗಾಜು ಒಡೆದು 33 ಲಕ್ಷ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಕಳ್ಳರ ಕೈಚಳಕದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಆರೋಪಿಯಿಂದ 30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಘಟನೆ ಏನು?

     ಸಿವಿಲ್ ಕಾಂಟ್ರ್ಯಾಕ್ಟರ್ ಸಂತೋಷ್ ಹಾವೇರಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ರೂ. ಹಣವನ್ನು ಸಂಬಂಧಿಕರ ಖಾತೆಯಿಂದ ಚೆಕ್ ಮುಖಾಂತರ ಡ್ರಾ ಮಾಡಿಕೊಂಡಿದ್ದರು. ಡ್ರಾ ಮಾಡಿದ ಹಣವನ್ನು ಕಾರಿನ ಹಿಂಭಾಗದ ಸೀಟಿನಲ್ಲಿಟ್ಟಿದ್ದರು.

   ಸಂತೋಷ್ ಮಾ.6ರಂದು ಸಂಜೆ 4:05ಕ್ಕೆ ಮನೆ ಮುಂದೆ ಕಾರು ನಿಲ್ಲಿಸಿ, ಕಾರಿನಲ್ಲಿ ಹಣ ಬಿಟ್ಟು ಮನೆಯೊಳಗೆ ಹೋಗಿದ್ದರು. ಮನೆಯಲ್ಲಿ ಊಟ ಮಾಡಿ ವಾಪಸ್ ಸಂಜೆ 5:20ಕ್ಕೆ ಕಾರಿನ ಹತ್ತಿರ ಬಂದು ನೋಡಿದಾಗ ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

   2 ಬೈಕ್‌ಗಳಲ್ಲಿ ಬಂದಿದ್ದ 4 ಜನ ಕಳ್ಳರಲ್ಲಿ ಒಬ್ಬ ಕಾರಿನ ಬಳಿ ಸುತ್ತಾಡಿ, ಕಾರಿನ ಗ್ಲಾಸ್ ಒಡೆದು ಕಾರಿನ ಒಳಹೊಕ್ಕು ಹಣವಿದ್ದ ಬ್ಯಾಗ್ ತೆಗೆದುಕೊಂಡಿದ್ದಾನೆ. ನಂತರ ಬೈಕ್‌ನಲ್ಲಿ ಬಂದ ಮತ್ತೊಬ್ಬ ಖದೀಮ ಆತನನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Recent Articles

spot_img

Related Stories

Share via
Copy link