ಶ್ರೀನಗರ:
ಜಮ್ಮು-ಕಾಶ್ಮೀರ ಪೊಲೀಸರು ಜಮ್ಮುವಿನಲ್ಲಿ ದೇವಾಲಯವೊಂದನ್ನು ಧ್ವಂಸಗೊಳಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅರ್ಜುನ್ ಶರ್ಮಾ ಬಂಧಿತ ವ್ಯಕ್ತಿಯಾಗಿದ್ದು, ಆ ದೇವಾಲಯದಲ್ಲಿ ವಾಮಾಚಾರ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾಗಿ ಬಂಧಿತ ವ್ಯಕ್ತಿ ಹೇಳಿದ್ದಾನೆ. ನಗ್ರೋಟಾದಲ್ಲಿ ಈ ಘಟನೆ ನಡೆದಿದ್ದು, ಇತ್ತೀಚಿನ ದಿನಗಳಲ್ಲಿ ಈ ರೀತಿ ನಡೆದ 2 ನೇ ಘಟನೆ ಇದಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ದೇವಾಲಯಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಯಾವುದೇ ರಾಜಕೀಯ ಪ್ರೇರಿತ ಅಂಶಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಶರ್ಮಾ ಹಳೆಯ ವೈಷಮ್ಯದ ಕಾರಣ ಮತ್ತು ‘ವಾಮಾಚಾರ ನಡೆಯುತ್ತಿತ್ತು ಎಂಬ ಶಂಕೆಯಿಂದ ದೇವಸ್ಥಾನವನ್ನು ಧ್ವಂಸಗೊಳಿಸಿದ್ದ ಮತ್ತು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. “ನಾವು ಪ್ರಮುಖ ಆರೋಪಿ ಅರ್ಜುನ್ ಶರ್ಮಾನನ್ನು ಬಂಧಿಸಿದ್ದೇವೆ. ಅವನು ದೇವಾಲಯವನ್ನು ಧ್ವಂಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ” ಎಂದು ಜಮ್ಮು (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಹೇಳಿದ್ದಾರೆ.