ಬೆಂಗಳೂರು
ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ 1 ಲಕ್ಷ ಮನೆಗಳನ್ನು ಜನರಿಗೆ ಒದಗಿಸಲಾಗುವುದು ಎಂದು ವಸತಿ ಖಾತೆ ಸಚಿವ ವಿ.ಸೋಮಣ್ಣ ಪ್ರಕಟಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು,ಕಾಯಕ ಯೋಗಿ ಮತ್ತು ನೆಮ್ಮದಿಯ ನೆಲೆ,ಅಭಿವೃದ್ಧಿಯ ಬಲೆ ಪುಸ್ತಕಗಳನ್ನು ಬಿಡುಗಡೆ ಮಾಡಿದರಲ್ಲದೆ,ನಲವತ್ತಾರು ತಿಂಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮ್ಮ ಇಲಾಖೆಯ ವತಿಯಿಂದ ಆಗಿರುವ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜೀವ್ ಗಾಂಧಿ ವಸತಿ ನಿಗಮದಡಿ ಐದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಜನರಿಗೆ ಮಂಜೂರು ಮಾಡಿದ್ದು,ಈ ಪೈಕಿ ಮೂರೂವರೆ ಲಕ್ಷ ಮನೆಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದ ಅವರು, ಇನ್ನೂ ಒಂದು ಲಕ್ಷ ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದ್ದು ಇನ್ನೆರಡು ತಿಂಗಳಲ್ಲಿ ಜನರಿಗೆ ವಿತರಣೆಯಾಗಲಿದೆ ಎಂದರು.ಉಳಿದಂತೆ ಎರಡು ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾರ್ಯಕ್ಕೆ ಒಪ್ಪಿಗೆ ನೀಡಲಾಗಿದ್ದು ಒಟ್ಟು ಏಳು ಲಕ್ಷ ಮನೆಗಳನ್ನುಜನರಿಗೆ ನೀಡಿದಂತಾಗಲಿದೆ ಎಂದರು.
ಇದೇ ರೀತಿ ಆರ್ಥಿಕ ದುರ್ಬಲ ವರ್ಗದವರಿಗೆ ನೀಡಲಾಗುತ್ತಿರುವ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಬಹುತೇಕ ಪೂರ್ಣಗೊಳ್ಳುತ್ತಾ ಬಂದಿದ್ದು,ಅದಾಗಲೇ ಮನೆಗಳ ವಿತರಣೆ ಕಾರ್ಯ ಆರಂಭವಾಗಿದೆ ಎಂದು ನುಡಿದರು. ನಾವು ಅಧಿಕಾರಕ್ಕೆ ಬಂದಾಗ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು.ಆದರೆ ನಾವು ಬಂದ ನಂತರ ಈ ಯೋಜನೆಗೆ ಚಾಲನೆ ನೀಡಿದ್ದಲ್ಲದೆ ಇದನ್ನು ಪೂರ್ಣಗೊಳಿಸುವ ಹಂತಕ್ಕೆ ತಂದಿದ್ದೇವೆ ಎಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಸತಿ ಕ್ರಾಂತಿ ಮಾಡಲಾಗಿದೆ ಎಂದು ಬಣ್ಣಿಸಿದ ಅವರು,ಬೆಂಗಳೂರು ಹೊರತು ಪಡಿಸಿ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಆರು ಸಾವಿರ ಎಕರೆ ಪ್ರದೇಶದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಜನರಿಗೆ ವಿತರಿಸಲಾಗಿದೆ ಎಂದರು.
ಈ ಮಧ್ಯೆ ಮೂರು ಲಕ್ಸಕ್ಕೂ ಹೆಚ್ಚು ಜನರಿಗೆ ಆಸ್ತಿ ಹಂಚಿಕೆ ಪತ್ರ ನೀಡಲಾಗಿದ್ದು ಬೆಂಗಳೂರು ವ್ಯಾಪ್ತಿಯಲ್ಲಿ ಎರಡು ಸಾವಿರ ರೂಪಾಯಿಗಳಿಗೆ,ಗ್ರಾಮೀಣ ಪ್ರದೇಶಗಳಲ್ಲಿ ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸಿ ಈ ಹಕ್ಕು ಪತ್ರ ಮಾಡಿಕೊಡಲಾಗಿದೆ ಎಂದರು. ಈ ಪೈಕಿ 1.15 ಲಕ್ಷ ಜನರಿಗೆ ಈಗಾಗಲೇ ನೊಂದಣಿ ಮಾಡಿಸಿಕೊಡಲಾಗಿದ್ದು,ಉಳಿದ ಆಸ್ತಿಗಳನ್ನು ಸಧ್ಯದಲ್ಲೇ ನೊಂದಣಿ ಮಾಡಿಸಿಕೊಡುವುದಾಗಿ ತಿಳಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಕಾರ್ಯ ನಡೆದಿದ್ದು ಇನ್ನೆರಡು ತಿಂಗಳಲ್ಲಿ ಬಿಜಾಪುರ ಮತ್ತು ನಾಲ್ಕು ತಿಂಗಳಲ್ಲಿ ಹಾಸನ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣ ಕಳೆದ ತಿಂಗಳ ಅಂತ್ಯದಲ್ಲಿ ಲೋಕಾರ್ಪಣೆಗೊಂಡಿದ್ದು ಸಧ್ಯದಲ್ಲೇ ಇಂಡಿಗೋ ವಿಮಾನ ಅಲ್ಲಿಂದ ಕಾರ್ಯಾರಂಭ ಮಾಡಲಿದೆ ಎಂದು ವಿವರಿಸಿದರು. ಮೈಸೂರು ವಿಮಾನ ನಿಲ್ದಾಣದಿಂದ ಬೋಯಿಂಗ್ ವಿಮಾನ ಕಾರ್ಯಾರಂಭ ಮಾಡಲಿದೆ ಎಂದ ಅವರು,ಧರ್ಮಸ್ಥಳದಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ನಿರ್ಧಾರಕ್ಕೆ ಪೂರಕವಾಗಿ ಕೆಲಸ ಆರಂಭವಾಗಿದೆ ಎಂದು ಹೇಳಿದರು. ಧರ್ಮಸ್ಥಳದಿಂದ ಎಂಟು ಕಿಲೋಮೀಟರ್ ದೂರದಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಲಾಗಿದ್ದು ಸಧ್ಯದಲ್ಲೇ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸುವವರಿಗೆ ವಿಮಾನ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದರು. ಉಪನಗರ ರೈಲ್ವೆಯಿಂದ ಹಿಡಿದು ಹಲವು ಹಂತದಲ್ಲಿ ರೈಲ್ವೇ ಯೋಜನೆಗಳು ಜಾರಿಗೊಂಡಿದ್ದು,ಆ ಮೂಲಕ ಬಿಜೆಪಿ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ