ಮದುವೆಯ ದಿಕ್ಕನೇ ಬದಲಾಯಿಸಿದ ಒಂದು ಫೋನ್‌ ಕಾಲ್‌….!

ಹಾಸನ: 

     ತಾಳಿ‌ ಕಟ್ಟುವ ಸಮಯದಲ್ಲಿ ಮದುವೆ ಬೇಡ ಎಂದು ಹಸೆಮಣೆಯಿಂದ ವಧು ಹೊರ ನಡೆದಿರುವುದು ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆಂದು ವಧು ಮದುವೆ ನಿರಾಕರಿಸಿದ್ದಾಳೆ. ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜತೆ ಮದುವೆ ನಿಶ್ಚಯವಾಗಿತ್ತು. ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ತಲೆ ಅಲ್ಲಾಡಿಸುತ್ತಾ ನನಗೆ ಮದುವೆ ಬೇಡ ಎಂದು ಹೇಳಿದ್ದಾಳೆ.

    ಮುಹೂರ್ತದ ವೇಳೆ ಪ್ರಿಯಕರನಿಂದ ಯುವತಿಗೆ ದೂರವಾಣಿ ಕರೆ ಬಂದಿದ್ದು, ತಕ್ಷಣವೇ ಮದುವೆ ಬೇಡ ಎಂದು ಯುವತಿ ನಿರಾಕರಿಸಿದ್ದಾಳೆ. ಯುವತಿ ಹಠ ಮಾಡಿದ್ದಕ್ಕೆ ವರ ಕೂಡ ನನಗೂ ಈ ಮದುವೆ ಬೇಡ ಎಂದು ಕಣ್ಣೀರಿಡುತ್ತಾ ಹೋಗಿದ್ದಾನೆ. ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರೂ ಕೇಳದ ವಧು, ರೂಮ್‌ಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾಳೆ.

   ವಧು ಮದುವೆ ಬೇಡ ಎಂದಾಗ ಕೈಯಲ್ಲಿ ತಾಳಿ ಹಿಡಿದಿದ್ದ ವರ ಯಾಕೆ ಮದುವೆ ಬೇಡ ಎಂದು ಕೇಳಿದ್ದಾನೆ. ಕೊನೆಗೆ ಹಠ ಹಿಡಿದ ಬೆನ್ನಲ್ಲೇ ವರ ಕೂಡ ನನಗೂ ಮದುವೆ ಬೇಡ ಎನ್ನುತ್ತಾ ಕಣ್ಣೀರು ಹಾಕಿದ್ದಾನೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಸಹ ಕಣ್ಣೀರಿಟ್ಟಿದ್ದಾರೆ. ಕಲ್ಯಾಣ ಮಂಟಪದಲ್ಲಿ ಮದುವೆ ನೋಡಲು ಬಂದಿದ್ದ ನೂರಾರು ಸಂಬಂಧಿಕರು ಹುಡುಗಿಯ ಮಾತಿಗೆ ಶಾಕ್ ಆಗಿದ್ದಾರೆ. ತಾಳಿ ಕಟ್ಟಲು ಬಂದಾಗಲೇ ಹುಡುಗಿ ಮತ್ತೊಬ್ಬ ಹುಡುಗನನ್ನು ಪ್ರೀತಿಸುವ ವಿಚಾರ ತಂದೆ, ತಾಯಿಗೆ ಗೊತ್ತಾಗಿದೆ. ಇದರಿಂದ ಹುಡುಗಿ ಮನೆಯವರು ಈಗ ಕಣ್ಣೀರು ಹಾಕಿದ್ದಾರೆ.

     ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ತಾಳಿ ಕಟ್ಟಬೇಕಾದರೆ ವಧು ತಲೆ ಅಲ್ಲಾಡಿಸಿದಳು. ಆಗ ಪಾಪ ಮದುಮಗ ಮದುವೆ ಆಗ್ತಿಯಾ ಎಂದು ಕೇಳಿದ. ಆಕೆ ಇಲ್ಲ ಎಂದಳು. ಮದುಮಗ ತುಂಬಾ ಒಳ್ಳೆಯ ಹುಡುಗ. ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ಹುಡುಗ ಕೂಡ ಕಣ್ಣೀರು ಹಾಕಿದ. ಮದುವೆ ಹುಡುಗಿ ಹೀಗೆ ಮಾಡಬಾರದಿತ್ತು ಎಂದು ತಿಳಿಸಿದ್ದಾರೆ. ಕಲ್ಯಾಣ ಮಂಟಪಕ್ಕೆ ಹಾಸನ ಪೊಲೀಸರು ಭೇಟಿ ನೀಡಿ ಹುಡುಗ, ಹುಡುಗಿ ಹಾಗೂ ಸಂಬಂಧಿಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಮುರಿದು ಬಿದ್ದ ಮದುವೆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link