ಬೆಂಗಳೂರು :
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿನ ಸೋಲು- ಗೆಲುವಿನ ವಿಚಾರದ ಆಲೋಚನೆ ಯಲ್ಲಿರುವ ಶಾಸಕರು ಸದನಕ್ಕೆ ಬಾರದೇ ಇರುವುದು ತಪ್ಪು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯಲ್ಲಿ ಹೇಳಿದರು.
ಇಂದು ಸದನ ಬೆಳಗ್ಗೆ 10.30 ಕ್ಕೆ ಕರೆಯಲಾಗಿತ್ತು. ಆದರೆ, ಕೋರಮ್ ಇಲ್ಲದ ಕಾರಣ ನಿಗದಿತ ಅವಧಿಗಿಂತ ವಿಳಂಬವಾಗಿ ಸದನ ಸಮಾವೇಶಗೊಂಡ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ ಅವರು, ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿದ ಮಾಡಿದ ಭಾಷಣದ ಮೇಲೆ 15 ಸದಸ್ಯರು ಮಾತನಾಡಿದ್ದಾರೆ. ಒಟ್ಟು 13 ಗಂಟೆ 35 ನಿಮಿಷಗಳ ಕಾಲ ಚರ್ಚೆಯಾಗಿದೆ. ಜೆಡಿಎಸ್‌ನ 7 ಸದಸ್ಯರು, ಆಡಳಿತ ಪಕ್ಷದ ಮೂವರು ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ನ ಐವರು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ ಎಂದು ತಿಳಿಸಿದರು.
ಸದಸ್ಯರ ಗೈರಿಗೆ ಅಸಮಾಧಾನ :
ನಂತರ ಸದಸ್ಯರ ಹಾಜರಾತಿ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ಕಾಗೇರಿ, ಇಂದು ಬೆಳಗ್ಗೆ 10.30 ಗಂಟೆಯಿಂದಲೂ ಕೋರಂ ಗಂಟೆ ಆರಂಭವಾಗಿತ್ತು. ಕೋರಂ ಆಗದ ಕಾರಣ ಕಲಾಪ 11.20 ಕ್ಕೆ ಆರಂಭವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆಯ ದೃಷ್ಟಿಯಿಂದ ಸಂಸದೀಯ ವ್ಯವಸ್ಥೆಯನ್ನು ಕಡೆಗಣಿಸಬಾರದು. ಎಲ್ಲರಿಗೂ ಚುನಾವಣೆಯಲ್ಲಿ ಒಳ್ಳೆಯದಾಗಲಿ. ಈ ವ್ಯವಸ್ಥೆಯ ಬಗ್ಗೆ ಜನರಿಗೆ ಹೆಚ್ಚು ವಿಶ್ವಾಸ ಮೂಡುವಂತೆ, ವ್ಯವಸ್ಥೆಗೆ ಹೆಚ್ಚು ಶಕ್ತಿ ತುಂಬುವ ರೀತಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸದನಕ್ಕೆ ಆಗಮಿಸಿ ಕಲಾಪದಲ್ಲಿ ಭಾಗಿಯಾಗಬೇಕು. ಇದಕ್ಕಿಂತ ಹೆಚ್ಚು ಹೇಳುವುದಿಲ್ಲ ಎಂದು ಕಳಕಳಿ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲು ಆರಂಭಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರತಿಪಕ್ಷದ ನಾಯಕರು ಇಲ್ಲದಿರುವುದನ್ನು ಗಮನಿಸಿ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಇದ್ದಾರೆ. ಸಾಕು ಎಂದರು. ಆಗ ಖಾದರ್ ಅವರು, ಪ್ರತಿಪಕ್ಷದ ಕಡೆ ಸದಸ್ಯರ ಹಾಜರಾತಿ ಕಡಿಮೆ ಇರುವುದೇನೋ ಸರಿ. ಆಡಳಿತ ಪಕ್ಷದ ಕಡೆಯೂ ಸದಸ್ಯರ ಹಾಜರಾತಿ ಕೊರತರೆ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಮಾತು ಮುಂದುವರೆಸಿ ಖಾದರ್ ಅವರು ನಿಜವಾದ ನಾಯಕರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಅವರು, ಬಂಡೆ ಥರ ಸದನದಲ್ಲಿರುತ್ತಾರೆ ಎಂದು ತಿಳಿಸಿ ಉತ್ತರ ಮುಂದುವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ