ಆನ್‌ ಲೈನ್‌ ಬೆಟ್ಟಿಂಗ್ ಆ್ಯಪ್ ಗಳನ್ನು ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಮನವಿ

ಬೆಂಗಳೂರು:

   ಯುವಕರು ಹಾಗೂ ಮಕ್ಕಳ‌ ಮೇಲೆ ದುಷ್ಪರಿಣಾಮ ಬೀರುತ್ತಿರುವ ಆನ್​ಲೈನ್ ಗೇಮ್, ಬೆಟ್ಟಿಂಗ್ ಆ್ಯಪ್​​ಗಳನ್ನ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮನವಿ ಮಾಡಿಕೊಂಡಿದ್ದಾರೆ.

   ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಅವರು, ಆನ್‌ಲೈನ್ ಗೇಮ್‌ಗಳು, ಬೆಟ್ಟಿಂಗ್ ಆ್ಯಪ್​ಗಳು ಇಂದಿನ ಮಕ್ಕಳು ಹಾಗೂ ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಕೋವಿಡ್ ಸಮಯದಲ್ಲಿ ಅನೇಕ ಆನ್‌ಲೈನ್ ಗೇಮ್‌ಗಳು, ಆ್ಯಪ್‌ಗಳನ್ನು ನಿಷೇಧಿಸುವುದು ಸೇರಿದಂತೆ ಅನೇಕ ಕ್ರಾಂತಿಕಾರಿ ಹೆಜ್ಜೆಯನ್ನ ನೀವು ಇಟ್ಟಿದ್ದೀರಿ. ಅನೇಕ ಕುಟುಂಬಗಳು ಮತ್ತು ಯುವಕರು ಈ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗುವುದನ್ನು ನಾನು ನೋಡಿದ್ದೇನೆ ಮತ್ತು ಈ ಆನ್‌ಲೈನ್ ಆಟಗಳಿಗೆ ವ್ಯಸನದ ನಂತರದ ಪರಿಣಾಮಗಳಿಂದ ಕುಟುಂಬಗಳು ಬೀದಿಗೆ ಬಂದಿವೆ.

   ಈ ಗೇಮ್‌ಗಳ ಮಾಲೀಕರು ಮಾತ್ರ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಆದರೆ, ಇದರಿಂದ ಬಡಜನರು ಬಲಿಯಾಗುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಗೊಳಿಸಿದಲ್ಲಿ ಧೈರ್ಯ ಪ್ರದರ್ಶಿಸಿದ್ದೀರಿ. ಈ ಬಗ್ಗೆ ನೀವು ವೈಯಕ್ತಿಕ ಗಮನಹರಿಸಿ ದೇಶಾದ್ಯಂತ ಹೊಸ ಸಾಮಾಜಿಕ ಪಿಡುಗು ಎಂದು ಸಾಬೀತಾಗಿರುವ ಇಂತಹ ಆ್ಯಪ್​ಗಳ ಮಾಲೀಕರು/ಸಂಸ್ಥಾಪಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಾನು ಈ ಮೂಲಕ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

   ಆನ್ ಲೈನ್ ಗೇಮಿಂಗ್ ವಿಷಯ ಮತ್ತು ನಮ್ಮ ರಾಜ್ಯಕ್ಕೆ ಸಂಬಂಧಿಸಿದ ಇತರ ಕೆಲವು ಸಮಸ್ಯೆಗಳ ಬಗ್ಗೆ‌ ಚರ್ಚಿಸಿಲು ಮುಂದಿನ ದಿನಗಳಲ್ಲಿ ತಮ್ಮನ್ನು ಭೇಟಿ ಮಾಡಲು ನಾನು ಎದುರು ನೋಡುತ್ತೇನೆ ಎಂದು ಇದೇ ವೇಳೆ ಭೇಟಿಗೆ ಸಮಾವಕಾಶವನ್ನೂ ಛಲವಾದಿ ನಾರಾಯಣಸ್ವಾಮಿ ಅವರು ಕೋರಿದ್ದಾರೆ

Recent Articles

spot_img

Related Stories

Share via
Copy link
Powered by Social Snap