ಉ.ಪ್ರದೇಶ:
ಆನ್‌ಲೈನ್ ಗೇಮಿಂಗ್‌ನಲ್ಲಿ ಅಪಾರ ಹಣ ಕಳೆದುಕೊಂಡ ನಂತರ ಕಾನ್‌ಸ್ಟೆಬಲ್ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಸೂರ್ಯ ಪ್ರಕಾಶ್ ಎಂದು ಗುರುತಿಸಲಾದ ಕಾನ್‌ಸ್ಟೆಬಲ್ ಸುಮಾರು 10-15 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಬಗ್ಗೆ ಜೊತೆಗೆ ಇದರಿಂದ ನೊಂದು ಒಂದೆರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಹೇಳಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಕಾನ್‌ಸ್ಟೆಬಲ್ ಆರ್ಥಿಕ ಸಹಾಯಕ್ಕಾಗಿ ಹಿರಿಯ ಅಧಿಕಾರಿಗಳ ಮುಂದೆ ಕೈ ಚಾಚಿರುವುದನ್ನು ಕಾಣಬಹುದು.
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಉನ್ನಾವ್ ಪೊಲೀಸರು ವೀಡಿಯೊಗೆ ಪ್ರತಿಕ್ರಿಯಿಸಿದ್ದು, ಸೂರ್ಯ ಪ್ರಕಾಶ್ ಅವರಿಗೆ ಸಲಹೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಸಹಾಯ ಮಾಡುವುದಾಗಿ ಸಲಹೆ ನೀಡಿದ್ದಾರೆ. “ಕಳೆದ ಕೆಲವು ದಿನಗಳಿಂದ ನಾನು ಸಾಕಷ್ಟು ಒತ್ತಡಕ್ಕೊಳಗಾಗಿದ್ದೇನೆ. ನಾನು ಬ್ಯಾಂಕ್‌ನಿಂದ ಸಾಲ ಪಡೆದು ಹಣವನ್ನು ಆನ್‌ಲೈನ್ ಗೇಮಿಂಗ್‌ಗೆ ಹಾಕಿದ್ದೆ. ಈಗ, ನಾನು ಆನ್‌ಲೈನ್ ಗೇಮಿಂಗ್‌ನಲ್ಲಿ ಸುಮಾರು 10-15 ಲಕ್ಷ ರೂ. ಕಳೆದುಕೊಂಡಿದ್ದೇನೆ. ಇದು ನನ್ನ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ನಾನು 2-3 ಬಾರಿ ಆತ್ಮಹತ್ಯೆಗೆ ಕೂಡ ಪ್ರಯತ್ನಿಸಿದೆ” ಕಣ್ಣೀರಿಡುತ್ತಾ ಕಾನ್‌ಸ್ಟೆಬಲ್ ಸೂರ್ಯ ಪ್ರಕಾಶ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.