ಬೆಟ್ಟಿಂಗ್-ಅನಧಿಕೃತ ಆಪ್‌ಗಳ ಹಾವಳಿ: ಬೇಕಿದೆ ಕಡಿವಾಣ
ಭಾರತವು ಆನ್‌ಲೈನ್ ಗೇಮಿಂಗ್‌ನಲ್ಲಿ ವಿಶ್ವದ ಪ್ರಮುಖ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ವಿದೇಶಿ ಗೇಮಿಂಗ್ ಕಂಪನಿಗಳಿಗೆ ನೆಚ್ಚಿನ ಸ್ಥಳವಾಗಿದೆ. ಇದರ ಬೆನ್ನಲ್ಲೇ ಇದರಿಂದ ಮನೆ, ಮಠ ಕೊನೆಗೆ ಪ್ರಾಣವನ್ನೂ ಕಳೆದುಕೊಳ್ಳುತ್ತಿರುವವರ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ದಿಢೀರ್ ಹಣ ಗಳಿಕೆಯ ಆಸೆಯಿಂದ ಯುವಕರು ಆನ್‌ಲೈನ್ ಗೇಮಿಂಗ್ ಬಲೆಗೆ ಬೀಳುತ್ತಿದ್ದು, ಕ್ಷಿಪ್ರಗತಿಯಲ್ಲಿ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಈ ದಿಸೆಯಲ್ಲಿ ತಮಿಳುನಾಡು ಸರ್ಕಾರ ಆರ್‌ಎಂಜಿ ಆನ್‌ಲೈನ್ ಗೇಮ್ಸ್ ಅನ್ನು ನಿಷೇಧಿಸಿದ್ದು, ಕಠಿಣ ನಿಯಮಗಳನ್ನು ಪ್ರಕಟಿಸಿದೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಆಪ್‌ಗಳ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆಗೆ ತೆಲಂಗಾಣ ಸರ್ಕಾರ ಮುಂದಾಗಿದೆ. ಆನ್‌ಲೈನ್ ಗೇಮಿಂಗ್ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಜರುಗಿಸಬೇಕು ಎನ್ನುವ ಒತ್ತಾಯ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೇಳಿಬರುತ್ತಿದೆ. ಆನ್‌ಲೈನ್ ಗೇಮ್ ಎಂಬುದು ಬಳಕೆದಾರರು ಕಂಪ್ಯೂಟರ್ ಅಥವಾ ಮಧ್ಯವರ್ತಿಯೊಬ್ಬರ ಮೂಲಕ ಇಂಟರ್‌ನೆಟ್‌ನಲ್ಲಿ ಆಡುವ ಆಟವೇ ಆನ್‌ಲೈನ್ ಗೇಮ್ ಇದಾಗಿದೆ.
ನಕಲಿ ವೆಬ್‌ಸೈಟ್, ಮೊಬೈಲ್ ಫೋನ್ ಅಪ್ಲಿಕೇಶನ್‌ಗಳು ಪತ್ತೆ
ಸಾಮಾನ್ಯವಾಗಿ ಆಪ್ ಸ್ಟೋರ್‌ಗಳ ಮೂಲಕ ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಬೆಟ್ಟಿಂಗ್ ಆಡುವವರು, ಆಡಿಸುವವರು ಕಳುಹಿಸುವ ಲಿಂಕ್ ಬಳಸಿ ಬೆಟ್ ಮಾಡಬೇಕು. ಇಂತಿಷ್ಟು ಹಣ ಪಾವತಿಸಿದರೆ ಕ್ಯಾಸಿನೋದಲ್ಲಿ ನೀಡುವ ಚಿಪ್‌ಗಳಂತೆ ಹಣ ಡಿಪಾಸಿಟ್ ಆಗುತ್ತದೆ. ನಂತರ ಈ ಹಣದಲ್ಲಿ ಜೂಜಾಡುವವರು ಬೆಟ್ ಮಾಡುತ್ತಾರೆ. ಅಂದ ಹಾಗೆ ಈ ಆಟ ಆಫ್‌ಲೈನ್‌ನಲ್ಲಿ ಆಡಲಾಗುತ್ತದೆ. ಸಿಕ್ಸರ್, ಫೋರ್‌ಗಳಿಗೆ 1 ಸಾವಿರ ರೂ. ನಿಂದ 20 ಸಾವಿರ ರೂ.ವರೆಗೆ ಬೆಟ್ ಮಾಡಲಾಗುತ್ತದೆ. ಇದೆಲ್ಲ ಗಪ್‌ಚುಪ್ ಆಗಿ ನಡೆಯುವಂತಹ ಆಟವಾಗಿದೆ.
ಪಾರ್ಕರ್, ರಿಲೆಕ್ಸ್, ದುಬೈ ಎಕ್ಸ್ಚೇಂಜ್, ಲೋಟಸ್ ಮತ್ತು ಬಿಗ್‌ಬುಲ್ 24/7 ಸೇರಿದಂತೆ ಹಲವಾರು ಸಂಶಯಾಸ್ಪದ ನಕಲಿ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಫೋನ್ ಅಪ್ಲಿಕೇಶನ್‌ಗಳನ್ನೂ ಪತ್ತೆ ಮಾಡಲಾಗಿದೆ. ಪ್ರಸಿದ್ಧ ಬ್ರಾ÷್ಯಂಡ್‌ಗಳ ಹೆಸರಿನಲ್ಲಿ ಈ ಆಪ್‌ಗಳು, ವೆಬ್‌ಸೈಟ್‌ಗಳನ್ನು ತೆರಯಲಾಗುತ್ತಿದೆ. ಸಾವಿರಾರು ಜನರು ಈ ಅಪ್ಲಿಕೇಶನ್‌ಗಳಿಗೆ ಲಾಗಿನ್ ಆಗುತ್ತಾರೆ. ಟಾಸ್‌ನಿಂದ ಹಿಡಿದು ಇಡೀ ಪಂದ್ಯದವರೆಗೆ ವಿವಿಧ ಅಂಶಗಳ ಮೇಲೆ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿವೆ. ಪಂಟರ್‌ಗಳು ಟಾಸ್ ಯಾರು ಗೆಲ್ಲುತ್ತಾರೆ, ಮ್ಯಾಚ್ ರಿಸಲ್ಟ್ ಏನಾಗುತ್ತದೆ ಇತ್ಯಾದಿಗಳ ಮೇಲೆ ಬೆಟ್ ಮಾಡಬಹುದಾಗಿದೆ.
ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಆಯ್ಕೆಗಳಲ್ಲಿ ಬೆಟ್ಟಿಂಗ್ ಮಾಡಲು ಪಂಟರ್‌ಗಳು ಡಿಜಿಟಲ್ ನಾಣ್ಯಗಳನ್ನು ಬಳಸುತ್ತಾರೆ. ಇದನ್ನು ಅವರು ಚಿಪ್ಸ್ ಎಂದು ಕರೆಯುತ್ತಾರೆ. ಅಪ್ಲಿಕೇಶನ್‌ಗಳು ಪ್ರೀಮಿಯಂ ಮತ್ತು ಸಾಮಾನ್ಯ ಮಟ್ಟದ ಬೆಟ್ಟಿಂಗ್ ಅನ್ನು ಸಹ ನೀಡುತ್ತವೆ. ಹಲವಾರು ಮಧ್ಯವರ್ತಿಗಳು ಪಂಟರ್‌ಗಳಿಗೆ ಪ್ರೀಮಿಯಂ ಖಾತೆಗಳನ್ನು ನೀಡುತ್ತಾರೆ.
ಹಣ ಪಾವತಿಸಿ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ಗಳಿಗೆ ಲಾಗಿನ್ ಕ್ರೆಡೆನ್ಶಿಯಲ್ಗಳನ್ನು ಪಡೆಯುತ್ತಾರೆ. ಪ್ರತಿ ಖರೀದಿಯೊಂದಿಗೆ, ಚಿಪ್ಸ್ ಅನ್ನೂ ಅವರು ಖರೀದಿಸುತ್ತಾರೆ. ಬೆಟ್ಟಿಂಗ್ ದಂಧೆಕೋರರು ಕೆಲವೇ ನಿಮಿಷಗಳಿಗಾಗಿ ಖಾತೆಗಳನ್ನು ಖರೀದಿಸುತ್ತಾರೆ. ಈ ಜೂಜಾಟವು ಬಾಲ್-ಟು-ಬಾಲ್ ಅಥವಾ ಕೇವಲ ಒಂದು ಬಾಲ್‌ಗಾಗಿ ನಡೆಯುವುದರಿಂದ, ಪಂಟರ್‌ಗಳು ಈ ಖಾತೆಗಳನ್ನು 10-20 ನಿಮಿಷಗಳಿಗಷ್ಟೇ ಖರೀದಿಸುತ್ತಾರೆ.
ಕರ್ನಾಟದಲ್ಲೂ ನಿಷೇಧಕ್ಕೆ ಪ್ರಯತ್ನ
ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್‌ಗಳ ನಿಯಂತ್ರಣಕ್ಕೆ ಕರ್ನಾಟದಲ್ಲೂ ಸರ್ಕಾರ ಪ್ರಯತ್ನಿಸಿದೆ. ಹಣವನ್ನು ಪಣವಾಗಿರಿಸಿ ಆನ್‌ಲೈನ್ ಮೂಲಕ ಆಡುವ ಎಲ್ಲ ಬಗೆಯ ಜೂಜುಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ (1963) ತಿದ್ದುಪಡಿ ತಂದು 2021ರ ಅಕ್ಟೋಬರ್ 5ರಂದು ಹೊಸ ಕಾನೂನು ಜಾರಿಗೆ ತರಲಾಗಿತ್ತು. ತಿದ್ದುಪಡಿ ರದ್ದು ಕೋರಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಗ್ಯಾಲಕ್ಸಸ್ ಫನ್‌ವೇರ್ ಟೆಕ್ನಾಲಜೀಸ್ ಸೇರಿದಂತೆ ಹಲವು ಗೇಮಿಂಗ್ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಕಾಯ್ದೆಗೆ ತರಲಾಗಿದ್ದ ತಿದ್ದುಪಡಿಯನ್ನು ಹೈಕೋರ್ಟ್ 2022ರ ಫೆಬ್ರುವರಿಯಲ್ಲಿ ರದ್ದುಗೊಳಿಸಿತ್ತು.
ಇದು ಅಧಿಕೃತ ವಹಿವಾಟಿನ ಲೆಕ್ಕಾಚಾರ. ಆದರೆ, ಹಲವು ಗೇಮಿಂಗ್ ಕಂಪನಿಗಳು, ಗೇಮ್‌ಗಳೂ ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ. ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್‌ನಲ್ಲಿ ಕಪುö್ಪ ಹಣದ ಚಲಾವಣೆಯೂ ದೊಡ್ಡ ಮಟ್ಟದಲ್ಲಿ ಆಗುತ್ತಿದೆ.
ಆನ್‌ಲೈನ್ ಆಟಗಳನ್ನು ಕೌಶಲ ಆಧಾರಿತ ಆಟ (ಸ್ಕಿಲ್ ಬೇಸ್ಡ್) ಮತ್ತು ಅದೃಷ್ಟ ಆಧಾರಿತ ಆಟ (ಚಾನ್ಸ್ ಬೇಸ್ಡ್) ಎಂದು ವಿಭಾಗಿಸಲಾಗಿದೆ. ಜೂಜಾಟದ ಉದ್ದೇಶದಿಂದ ನಡೆಯುತ್ತಿರುವ ರಿಯಲ್ ಮನಿ ಗೇಮ್ ಗಳಿಗೆ (ಆರ್‌ಎಂಜಿ) ಮತ್ತು ಹಣವನ್ನು ಪಣಕ್ಕಿಟ್ಟು ಆಡುವ ಆನ್‌ಲೈನ್ ಗೇಮ್ಸ್ಗೆ ಅವಕಾಶವಿಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ 2023ರಲ್ಲಿ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಸಂಹಿತೆ) ನಿಯಮಗಳು ಹೇಳುತ್ತವೆ. ಇದರ ನಿರ್ವಹಣೆಗೆ ಸರ್ಕಾರವು ಸ್ವಯಂ ನಿಯಂತ್ರಣಾ ಸಂಸ್ಥೆಗಳನ್ನು (ಎಸ್‌ಆರ್‌ಬಿ) ರೂಪಿಸಬೇಕೆಂದು, ಅದರಲ್ಲಿ ಉದ್ಯಮ ರಂಗದ ತಜ್ಞರು, ಮಕ್ಕಳ ತಜ್ಞರು, ಮಾನಸಿಕ ತಜ್ಞರು ಇರಬೇಕು ಎಂದು ಅವು ಹೇಳುತ್ತವೆ. ಎಸ್‌ಆರ್‌ಬಿಗಳು ಯಾವ ಆರ್‌ಎಂಜಿಗಳಿಗೆ ಅನುಮತಿ ನೀಡಬೇಕು ಎಂದು ಶಿಫಾರಸು ಮಾಡುವ ಅಧಿಕಾರ ಹೊಂದಿರುತ್ತವೆ.
ಇಷ್ಟಾದರೂ ಯಾವುದು ಕೌಶಲ ಆಧಾರಿತ ಆಟ, ಯಾವುದು ಅದೃಷ್ಟ ಆಧಾರಿತ ಆಟ, ಯಾವುದು ಜೂಜು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರಕರಣವೊಂದರಲ್ಲಿ, ಪೋಕರ್, ರಮ್ಮಿ ಇವು ಕೌಶಲ ಆಧಾರಿತ ಆಟಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಇದರ ನಡುವೆಯೇ ಆನ್‌ಲೈನ್ ರಿಯಲ್ ಮನಿ ಗೇಮಿಂಗ್ ಕಂಪನಿಗಳು, ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ (ಎಐಜಿಎಫ್), ದ ಫೆಡರೇಷನ್ ಆಫ್ ಫ್ಯಾಂಟಿಸಿ ಸ್ಪೋರ್ಟ್್ಸ (ಎಫ್‌ಐಎಫ್‌ಎಸ್) ಮತ್ತು ಇ-ಗೇಮಿಂಗ್ ಫೆಡರೇಷನ್ (ಇಜಿಎಫ್) ಜಂಟಿಯಾಗಿ ನೀತಿಸಂಹಿತೆಗೆ (ಸಿಒಇ) ಸಹಿ ಹಾಕಿವೆ. ಈ ಮೂಲಕ ರಕ್ಷಣಾತ್ಮಕ ಗೇಮಿಂಗ್ ಪದ್ಧತಿಗಳು, ಆಟ ಆಡುವವರ ಸುರಕ್ಷತೆ ಮತ್ತು ಅವರ ಇ-ಕೆವೈಸಿ ದೃಢೀಕರಣ, ಹಣ ತೊಡಗಿಸುವ ಮಿತಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿವೆ.
ದೊಡ್ಡ ಮೊತ್ತದ ಆದಾಯ
ಆನ್‌ಲೈನ್ ಆಟಗಳ ಮೇಲೆ ಕೇಂದ್ರ ಸರ್ಕಾರವು ಶೇ 28ರಷ್ಟು ಜಿಎಸ್‌ಟಿ ವಿಧಿಸುತ್ತಿದೆ. ಜತೆಗೆ, ಅದರಿಂದ ಬರುವ ಆದಾಯದ ಮೇಲೆ ಶೇ 30ರಷ್ಟು ತೆರಿಗೆ ವಿಧಿಸುತ್ತಿದೆ. ಆನ್‌ಲೈನ್ ಗೇಮಿಂಗ್‌ನಿAದಾಗಿ ಸರ್ಕಾರಗಳಿಗೆ (ಕೇಂದ್ರ ಮತ್ತು ರಾಜ್ಯ) ವಾರ್ಷಿಕವಾಗಿ ದೊಡ್ಡ ಮೊತ್ತದ ಆದಾಯ ಬರುತ್ತದೆ. ಈ ಕಾರಣಕ್ಕಾಗಿಯೇ ಕಠಿಣ ನಿಲುವು ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪವೂ ಇದೆ.
ಸೋಷಿಯಲ್ ಮೀಡಿಯಾ ಸ್ಟಾರ್‌ಗಳಿಗೆ ಖಡಕ್ ವಾರ್ನಿಂಗ್
ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದ ಸ್ಟಾರ್‌ಗಳಿಗೆ ಸಿಸಿಬಿ ಪೊಲೀಸರು ಬಿಗ್ ಶಾಕ್ ನೀಡಿದ್ದರು. ಅಲ್ಲದೇ ಹಣದ ಆಸೆಗೆ ಯಾವ ಟೀಂ ಗೆಲ್ಲುತ್ತೆ, ಯಾವ ಟೀಂ ಸೋಲುತ್ತೆ ಎನ್ನುವ ಪ್ರೆಡಿಕ್ಷನ್ ನೀಡುವ ಆಪ್ಗಳ ಬಗ್ಗೆ ಸ್ಟೋರಿ ಹಾಕಿ ಪ್ರಮೋಟ್ ಮಾಡ್ತಿದ್ದ ರೀಲ್ಸ್ ಸ್ಟಾರ್‌ಗಳಿಗೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದರು.
ರೀಲ್ಸ್ ಸ್ಟಾರ್‌ಗಳು ಐಪಿಎಲ್ ಬೆಟ್ಟಿಂಗ್ ಬಗ್ಗೆ ಸ್ಟೋರಿಗಳನ್ನ ಹಾಕುತ್ತಿದ್ದರು. ಗೆಲ್ಲುವ ಟೀಂ, ಸೋಲುವ ಟೀಂ ಯಾವುದೆಂದು ಹೇಳಿ ಅಂತ ಸ್ಟೇಟಸ್ ಹಾಕುತ್ತಿದ್ದರಂತೆ. ಆ ಮೂಲಕ ಗೆಲುವು ಹಾಗೂ ಸೋಲಿನ ಬಗ್ಗೆ ಜನರ ಅಭಿಪ್ರಾಯ ತಿಳಿದುಕೊಳ್ಳುತ್ತಿದ್ದರಂತೆ. ಐಪಿಎಲ್ ಬೆಟ್ಟಿಂಗ್ ಬುಕ್ಕಿಗಳು ನೀಡೋ ಡೀಟೇಲ್ಸ್ ಮೇರೆಗೆ ಸ್ಟೋರಿ ಅಪ್ಲೋಡ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಹಣದ ಆಸೆಗೆ ಸ್ಟೋರಿ ಹಾಕಿ ಪ್ರಮೋಟ್ ಮಾಡುತ್ತಿದ್ದವರಿಗೆ ಪೊಲೀಸರು ಬಿಸಿಮುಟ್ಟಿಸಿದ ಬಳಿಕ ರೀಲ್ಸ್ ಸ್ಟಾರ್‌ಗಳು ಎಚ್ಚೆತ್ತುಕೊಂಡಿದ್ದಾರೆ.
ಶಿಕ್ಷೆಯೂ ಇದೆ
ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡವರಿಗೆ ಕರ್ನಾಟಕ ಪೊಲೀಸ್ ಕಾಯ್ದೆ 196 ರಡಿ 400 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಮಾಣದ ಪ್ರಕರಣಗಳಲ್ಲಿ 3 ತಿಂಗಳು ಶಿಕ್ಷೆ ವಿಧಿಸಲು ಅವಕಾಶವಿದೆ.
ಸದನದಲ್ಲೂ ಚರ್ಚೆ
ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಇತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅದಿನ್ನೂ ಇತ್ಯರ್ಥಕ್ಕೆ ಬಾಕಿ ಇದೆ. 2024ರ ಫೆಬ್ರುವರಿಯಲ್ಲಿ ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ಬಗ್ಗೆ ಸದನದಲ್ಲಿ ಚರ್ಚೆಯಾಗಿತ್ತು. ಈ ಸಂದರ್ಭದಲ್ಲಿ ಇವುಗಳ ನಿಷೇಧಕ್ಕೆ ಹೊಸ ಕಾನೂನು ತರಲು ಸರ್ಕಾರ ಯೋಜಿಸಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇತ್ತೀಚೆಗೆ ನಡೆದ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲೂ ಪ್ರಿಯಾಂಕ್ ಖರ್ಗೆ ಅವರು ಹೊಸ ಕಾನೂನು ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. ಛತ್ತೀಸಗಢದ ಮಾದರಿಯಲ್ಲಿ ಕೌಶಲ ಆಧಾರಿತ ಗೇಮಿಂಗ್‌ಗೆ ಅವಕಾಶ ಕೊಟ್ಟು, ಅದೃಷ್ಟ ಆಧಾರಿತ ಗೇಮಿಂಗ್‌ಗೆ ನಿರ್ಬಂಧ ಹೇರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದ್ದರು.
ಸಂಸತ್ತಿನಲ್ಲೂ ಚರ್ಚೆ
ಎಲ್ಲ ಆನ್‌ಲೈನ್ ವೆಬ್‌ಸೈಟ್, ಅಪ್‌ಗಳನ್ನು ನಿರ್ಬಂಧಿಸಬೇಕು ಎನ್ನುವ ವಿಚಾರ ಸಂಸತ್ತಿನಲ್ಲಿಯೂ ಇತ್ತೀಚೆಗೆ ಪ್ರತಿಧ್ವನಿಸಿತ್ತು. ಆದರೆ, ಇದು ರಾಜ್ಯಪಟ್ಟಿಯಲ್ಲಿ ಬರುವ ವಿಚಾರವಾಗಿದ್ದು, ರಾಜ್ಯಗಳ ಮಟ್ಟದಲ್ಲೇ ಕಾನೂನು ತರಬೇಕು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಇಷ್ಟಾದರೂ ಕೇಂದ್ರವು ಆನ್‌ಲೈನ್ ಗೇಮಿಂಗ್ ಸಂಬAಧ ಕೆಲವು ನಿಯಮಗಳನ್ನು ರೂಪಿಸಿದ್ದು, 1,410 ಆನ್‌ಲೈನ್ ಗೇಮಿಂಗ್ ಆಪ್/ವೆಬ್‌ಸೈಟ್‌ಗಳನ್ನು (2022ರಿಂದ 2025 ಫೆಬ್ರುವರಿವರೆಗೆ) ನಿರ್ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದರು. ಅದರ ಹೊರತಾಗಿಯೂ ಇಂಥ ಪ್ರಕರಣಗಳು ವರದಿಯಾದರೆ, ತಪ್ಪಿತಸ್ಥರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 112ರ ಅಡಿ ಕ್ರಮ ಜರುಗಿಸಲಾಗುವುದು ಎಂದಿದ್ದರು.
