ನವದೆಹಲಿ:
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತ ಎರಡೂ ರಾಷ್ಟ್ರಗಳ ಪ್ರಧಾನಿಗಳು ಸೋಮವಾರ ಘೋಷಣೆ ಮಾಡಿದರು. ಕಳೆದ ಒಂಬತ್ತು ತಿಂಗಳಿನಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಯುತ್ತಿದ್ದು, ಇದು ಈಗ ಅಂತಿಮಗೊಂಡಿದೆ. ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಸೋಮವಾರ ದೂರವಾಣಿ ಸಂಭಾಷಣೆ ನಡೆಸಿದರು. ಈ ಬಳಿಕ ಎರಡೂ ರಾಷ್ಟ್ರಗಳ ನಾಯಕರು ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಘೋಷಣೆಯನ್ನು ಮಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಪರಸ್ಪರ ದೂರವಾಣಿ ಸಂಭಾಷಣೆ ನಡೆಸಿದ ಬಳಿಕ ಇಬ್ಬರೂ ನಾಯಕರು ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ಯಶಸ್ವಿಯಾಗಿರುವುದನ್ನು ಘೋಷಿಸಿದರು.
ಕಳೆದ ಮಾರ್ಚ್ ತಿಂಗಳಲ್ಲಿ ಪ್ರಧಾನಿ ಲಕ್ಸನ್ ಅವರು ಭಾರತಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಎರಡು ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ನಡೆಸುವ ಕುರಿತು ಮಾತುಕತೆ ಪ್ರಾರಂಭವಾಗಿತ್ತು. ಅದು ಈಗ ಅಂತಿಮಗೊಂಡಿದೆ. ಈ ಒಪ್ಪಂದವು ಎರಡೂ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿಗಳಿಬ್ಬರು ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪರ ಒಪ್ಪಂದವು ಆರ್ಥಿಕವಾಗಿ ದೇಶಗಳನ್ನು ಬಲಪಡಿಸಲಿದೆ. ಮಾರುಕಟ್ಟೆ ಪ್ರವೇಶ ಹೆಚ್ಚಾಗಲಿದೆ. ಹೂಡಿಕೆ ಹರಿವನ್ನು ಉತ್ತೇಜಿಸಲಿದೆ. ಕಾರ್ಯತಂತ್ರದ ಸಹಕಾರ, ಬಹು ವಲಯಗಳಲ್ಲಿ ಜನರಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಎನ್ನಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ ಈ ಒಪ್ಪಂದದಿಂದ ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ದ್ವಿಗುಣಗೊಳ್ಳಲಿದೆ. ಅಲ್ಲದೇ 15 ವರ್ಷಗಳಲ್ಲಿ ಭಾರತದಲ್ಲಿ ನ್ಯೂಜಿಲೆಂಡ್ 20 ಶತಕೋಟಿ ಯುಎಸ್ ಡಾಲರ್ ಹೂಡಿಕೆ ಮಾಡಲು ಅವಕಾಶವಿದೆ. ರಕ್ಷಣೆ, ಕ್ರೀಡೆ, ಶಿಕ್ಷಣ, ಜನರ ನಡುವಿನ ಸಂಬಂಧಗಳಲ್ಲಿ ಸಹಕಾರವನ್ನು ಹೆಚ್ಚಿಸಲಿದೆ. ಭಾರತ ಮತ್ತು ನ್ಯೂಜಿಲೆಂಡ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆ ಇರುವುದಾಗಿ ಎರಡು ರಾಷ್ಟ್ರಗಳ ಪ್ರಧಾನಿಗಳು ಘೋಷಿಸಿದ್ದು, ಒಪ್ಪಂದದ ಯಶಸ್ಸಿಗೆ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಿರಂತರ ಸಂಪರ್ಕದಲ್ಲಿರಲು ಮೋದಿ ಮತ್ತು ಲಕ್ಸನ್ ಅವರು ಒಪ್ಪಿಕೊಂಡರು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಎರಡು ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಲಕ್ಸನ್, ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳು ಮುಕ್ತಾಯಗೊಂಡಿವೆ. ಭಾರತಕ್ಕೆ ನಮ್ಮ ರಫ್ತುಗಳಲ್ಲಿ ಶೇ. 95ರಷ್ಟು ಸುಂಕ ಕಡಿಮೆಯಾಗಲಿದೆ ಅಥವಾ ತೆಗೆದುಹಾಕಲಿದೆ. ಇದರಿಂದ ಎರಡು ದಶಕಗಳಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ರಫ್ತು ವರ್ಷಕ್ಕೆ 1.1 ಬಿಲಿಯನ್ ಡಾಲರ್ ನಿಂದ 1.3 ಬಿಲಿಯನ್ ಡಾಲರ್ ಗೆ ಹೆಚ್ಚಾಗಬಹುದು ಎಂದು ತಿಳಿಸಿದರು.
ಈ ಒಪ್ಪಂದವು ಎರಡೂ ದೇಶಗಳ ನಡುವೆ ಬಲವಾದ ಸ್ನೇಹವನ್ನು ನಿರ್ಮಿಸಲಿದೆ. ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಇದು ನ್ಯೂಜಿಲೆಂಡ್ ರೈತರು, ಬೆಳೆಗಾರರು ಮತ್ತು ವ್ಯವಹಾರಗಳಿಗೆ ಬಾಗಿಲು ತೆರೆಯಲಿದೆ ಎಂದು ಹೇಳಿದರು.
ನ್ಯೂಜಿಲೆಂಡ್ ಜೊತೆಗಿನ ಭಾರತದ ಮುಕ್ತ ವ್ಯಾಪಾರ ಒಪ್ಪಂದದ ಮೂಲಕ ಭಾರತ ಈಗ ಏಳನೇ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಂತಾಗಿದೆ. ಈಗಾಗಲೇ ಯುಎಇ, ಆಸ್ಟ್ರೇಲಿಯಾ, ಮಾರಿಷಸ್, ಓಮನ್, ಯುಕೆ ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಅಸೋಸಿಯೇಷನ್ ರಾಷ್ಟ್ರಗಳಾದ ಐಸ್ ಲ್ಯಾಂಡ್, ಲಿಚ್ಟೆನ್‌ಸ್ಟೈನ್, ನಾರ್ವೆ ಮತ್ತು ಸ್ವಿಟ್ಜರ್‌ಲ್ಯಾಂಡ್ ಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.








