ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಬ್ರಿಟನ್ ಪ್ರವಾಸದ ವೇಳೆ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಐತಿಹಾಸಿಕ ಒಪ್ಪಂದದಿಂದ ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ ವಹಿವಾಟು ಎರಡು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಭಾರತ ಮತ್ತು ಬ್ರಿಟನ್ ದೇಶಗಳ ನಡುವೆ ಸಮಗ್ರ ಆರ್ಥಿಕ ಒಪ್ಪಂದ ಅಥವಾ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ.
ಭಾರತ ಮತ್ತು ಯುಕೆ ಗುರುವಾರ ತಮ್ಮ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದವು. ಇದು ವಾರ್ಷಿಕವಾಗಿ ಸುಮಾರು $34 ಶತಕೋಟಿ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುತ್ತದೆ. ವಾಣಿಜ್ಯ ಸಚಿವಾಲಯದ ಪ್ರಕಾರ, FTA ಸುಮಾರು 99% ಸುಂಕ ಮಾರ್ಗಗಳ ಮೇಲಿನ ಸುಂಕಗಳನ್ನು ತೆಗೆದುಹಾಕುತ್ತದೆ, ಇದು ವ್ಯಾಪಾರ ಮೌಲ್ಯದ ಸುಮಾರು 100% ಅನ್ನು ಒಳಗೊಂಡಿದೆ. ಇದು ಎರಡೂ ಆರ್ಥಿಕತೆಗಳಲ್ಲಿ ಗಣನೀಯ ಹೊಸ ಅವಕಾಶಗಳನ್ನು ತೆರೆಯುವ ನಿರೀಕ್ಷೆಯಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, “ಹಲವಾರು ವರ್ಷಗಳ ಕಠಿಣ ಪರಿಶ್ರಮದ ನಂತರ ಇಂದು ನಮ್ಮ ಎರಡೂ ರಾಷ್ಟ್ರಗಳು ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ ಎಂಬುದು ನನಗೆ ಬಹಳ ಸಂತೋಷ ತಂದಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತ-ಯುಕೆ ಸಂಬಂಧಗಳಲ್ಲಿ ಇದನ್ನು “ಐತಿಹಾಸಿಕ ದಿನ” ಎಂದು ಕರೆದ ಪ್ರಧಾನಿ ಮೋದಿ, ಈ ಒಪ್ಪಂದವು ವಿಶೇಷವಾಗಿ ಭಾರತೀಯ ಯುವಕರು, ರೈತರು, ಮೀನುಗಾರರು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರಯೋಜನವನ್ನು ನೀಡುತ್ತದೆ, ಕೃಷಿ ಉತ್ಪನ್ನಗಳು, ಸಂಸ್ಕರಿಸಿದ ಆಹಾರ, ಜವಳಿ, ಪಾದರಕ್ಷೆಗಳು, ಸಮುದ್ರಾಹಾರ, ರತ್ನಗಳು ಮತ್ತು ಆಭರಣಗಳು ಮತ್ತು ಎಂಜಿನಿಯರಿಂಗ್ ಸರಕುಗಳಂತಹ ಪ್ರಮುಖ ಭಾರತೀಯ ರಫ್ತುಗಳು ಕಡಿಮೆ ಸುಂಕಗಳ ಅಡಿಯಲ್ಲಿ ಯುಕೆಯಲ್ಲಿ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಪಡೆಯುತ್ತವೆ.
ಈ ಒಪ್ಪದಿಂದ ಭಾರತೀಯ ರೈತರಿಗೆ ಅತಿ ಹೆಚ್ಚು ವರದಾನ ಸಿಕ್ಕಿದೆ. ಶೇ. 95ರಷ್ಟು ಕೃಷಿ ಉತ್ಪನ್ನಗಳಿಗೆ ಟ್ಯಾರಿಫ್ ರಹಿತ ಪ್ರವೇಶವನ್ನು ಬ್ರಿಟನ್ ನೀಡಿದೆ. ಅರಶಿನ, ಮೆಣಸು, ಏಲಕ್ಕಿ, ಉಪ್ಪಿನಕಾಯಿ, ಬೇಳೆಕಾಳುಗಳು ಇತ್ಯಾದಿ ಆಹಾರ ಉತ್ಪನ್ನಗಳಿಗೆ ಮುಕ್ತ ಪ್ರವೇಶ ಸಿಕ್ಕಿದೆ. ಹಣ್ಣ, ತರಕಾರಿಗಳಿಗೂ ಶೂನ್ಯ ಟ್ಯಾರಿಫ್ ಇದೆ.
ಸಾಂಪ್ರಾಯಿಕ ಕುಸುರಿ ಕಲೆ ಮತ್ತು ಕೌಶಲ್ಯ ಬೇಡುವ ಕೊಲ್ಹಾಪುರಿ ಚಪ್ಪಲಿ, ಬನರಾಸ್ ಸೀರೆ, ಮೈಸೂರು ಸಿಲ್ಕ್ ಸೀರೆ ಇತ್ಯಾದಿ ವಿವಿಧ ಉತ್ಪನ್ನಗಳಿಗೆ ಬ್ರಿಟನ್ ಮಾರುಕಟ್ಟೆಗೆ ಸುಲಭ ಪ್ರವೇಶ ಸಿಗಲಿದ್ದು ಈ ಉದ್ಯಮಗಳಲ್ಲಿ ಮಹಿಳೆಯರೇ ಹೆಚ್ಚಾಗಿ ತೊಡಗಿಸಿಕೊಂಡಿರುವುದರಿಂದ ಭಾರತದ ನಾರಿಶಕ್ತಿ ಮತ್ತಷ್ಟು ಗರಿಗೆದರುವ ಅವಕಾಶ ಇದೆ.
ಈ ಒಪ್ಪಂದವು ಯುಕೆಯಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ವಿಶೇಷವಾಗಿ ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ಏರೋಸ್ಪೇಸ್, ತಂತ್ರಜ್ಞಾನ ಮತ್ತು ಮುಂದುವರಿದ ಉತ್ಪಾದನಾ ವಲಯಗಳಲ್ಲಿನ ಕಾರ್ಮಿಕರಿಗೆ ಇದು ಅನೂಕೂಲವಾಗಲಿದೆ, ಈ ಒಪ್ಪಂದವು ಯುಕೆಯಿಂದ ಭಾರತಕ್ಕೆ ವಿಸ್ಕಿ, ಆಟೋಮೊಬೈಲ್‌ಗಳು ಮತ್ತು ಇತರ ಸರಕುಗಳ ರಫ್ತು ಸರಾಗಗೊಳಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
