ಉತ್ತರಾಖಂಡ:
ಆಪರೇಷನ್ ಕಾಲನೇಮಿ ಕಾರ್ಯಾಚರಣೆಯಲ್ಲಿ ಉತ್ತರಾಖಂಡ ಪೊಲೀಸರು ಸಾವಿರಕ್ಕೂ ಹೆಚ್ಚು ವಂಚಕ ಧಾರ್ಮಿಕ ನಾಯಕರನ್ನು ಬಂಧಿಸಿದ್ದಾರೆ. ಸನಾತನ ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಧಾರ್ಮಿಕ ನಾಯಕರನ್ನು ಹತ್ತಿಕ್ಕಲು ಜುಲೈ 10 ರಂದು ಆಪರೇಷನ್ ಕಲಾನೇಮಿ ಕಾರ್ಯಾಚರಣೆಯನ್ನು ಉತ್ತರಾಖಂಡದಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ ಈವರೆಗೆ ಸುಮಾರು 1,250 ಶಂಕಿತರನ್ನು ಪೊಲೀಸರು ಬಂಧಿಸಿ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ. ರಾಜ್ಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಉತ್ತರಾಖಂಡದ ಇನ್ಸ್‌ಪೆಕ್ಟರ್ ಜನರಲ್ ನಿಲೇಶ್ ಆನಂದ್ ಭರ್ನೆ, ಉತ್ತರಾಖಂಡ ಪೊಲೀಸರು ಶಂಕಿತ ಧಾರ್ಮಿಕ ನಾಯಕರನ್ನು ವಿಚಾರಣೆ ನಡೆಸಲು ನಿರಂತರ ಪರಿಶೀಲನಾ ಅಭಿಯಾನ ನಡೆಸುತ್ತಿದ್ದಾರೆ. ಈಗಾಗಲೇ 1,250 ಶಂಕಿತರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದರು.ಉತ್ತರಾಖಂಡದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಪೊಲೀಸರು ಆಪರೇಷನ್ ಕಲಾನೇಮಿಯನ್ನು ನಡೆಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚಿಸಿದ್ದರು ಎಂದು ಐಜಿ ಭರ್ನೆ ತಿಳಿಸಿದ್ದಾರೆ.
ಕನ್ವಾರಿಯಾಗಳಂತೆ ನಟಿಸುವ ದುಷ್ಕರ್ಮಿಗಳನ್ನು ಗುರುತಿಸಲು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ)ಗಳು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕನ್ವಾರಿಯಾಗಳ ವೇಷದಲ್ಲಿ ಜನರನ್ನು ವಂಚಿಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಉತ್ತರಾಖಂಡ ಪೊಲೀಸರು ಭಾನುವಾರ ಡೆಹ್ರಾಡೂನ್‌ನ ವಿವಿಧ ಪೊಲೀಸ್ ಠಾಣಾ ಪ್ರದೇಶಗಳಲ್ಲಿ ಆಪರೇಷನ್ ಕಲಾನೇಮಿ ಅಡಿಯಲ್ಲಿ ಸಂಘಟಿತ ದಾಳಿ ನಡೆಸಿ ಸಂತರು ಮತ್ತು ಋಷಿಗಳಂತೆ ನಟಿಸುತ್ತಿದ್ದ 34 ಮಂದಿಯನ್ನು ಬಂಧಿಸಿದರು.
ಬಂಧಿತರೆಲ್ಲರೂ ಆಧ್ಯಾತ್ಮಿಕ ವ್ಯಕ್ತಿಗಳ ವೇಷ ಧರಿಸಿ ಜನರನ್ನು ವಂಚಿಸುತ್ತಿದ್ದರು. ಆಪರೇಷನ್ ಕಲಾನೇಮಿ ಅಡಿಯಲ್ಲಿ 34 ನಕಲಿ ಬಾಬಾಗಳನ್ನು ಬಂಧಿಸಲಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಬಂಧಿತ ನಕಲಿ ಬಾಬಾಗಳಲ್ಲಿ 23 ಮಂದಿ ಬೇರೆ ರಾಜ್ಯದವರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ತಿಳಿಸಿದ್ದಾರೆ.
