ಬೆಂಗಳೂರು
ರಾಜ್ಯದ ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನದ ಬಗ್ಗೆ ಕಳವಳಗೊಂಡಿರುವ ದೋಸ್ತಿ ಪಕ್ಷಗಳ ನಾಯಕರು ಇದಕ್ಕೆ ಸೂಕ್ತ ಪ್ರತಿತಂತ್ರ ರೂಪಿಸುವ ನಿರ್ದಾರಕ್ಕೆ ಬಂದಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಗಂಭೀರ ನಡೆಸಲಾಗಿದೆ.
ಆಪರೇಷನ್ ಕಮಲದ ಭೀತಿಯ ಬಗ್ಗೆ ರಾತ್ರಿ ಬಹುಹೊತ್ತಿನ ತನಕ ಮಹತ್ವದ ಚರ್ಚೆ ನಡೆಸಲಾಗಿದೆ. ಸರ್ಕಾರ ಕೆಡವಲು ಬಿಜೆಪಿ ನಡೆಸುತ್ತಿರುವ ಷಡ್ಯಂತ್ರದ ಪ್ರಯತ್ನದ ಬಗ್ಗೆ ಕುಮಾರ ಸ್ವಾಮಿ ತಮ್ಮ ಸಂಪುಟ ಸದಸ್ಯರಿಗೆ ಸಮಗ್ರ ಮಾಹಿತಿ ವಿವರಗಳನ್ನು ನೀಡಿದ್ದಾರೆ.
ಬಿಜೆಪಿ ಸರ್ಕಾರ ಕೆಡವಲು ಎಲ್ಲಾ ಸಂಚು ನಡೆಸಿದೆ. ಯಡಿಯೂರಪ್ಪ ಅವರೇ ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ಸುಮಾರು 18 ಮಂದಿ ಶಾಸಕರು ಅವರ ತೆಕ್ಕೆಗೆ ಸಿಗುವ ಸಾಧ್ಯತೆ ಇದೆ. ಇದರಿಂದ ಅತಂತ್ರದ ಕರಿನೆರಳು ಸಕಾರದ ಮೇಲೆ ಖಚಿತವಾಗಿ ಇದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹಣೆದು ಪ್ರತ್ಯುತ್ತರ ನೀಡಬೇಕು. ಶಾಸಕರು ಪಕ್ಷ ಬಿಟ್ಟು ಹೋಗದಂತೆ ಆಯಾ ಪಕ್ಷಗಳ ಮುಖಂಡರು ಎಚ್ಚರಿಕೆ ವಹಿಸಬೇಕು. ಸಂಶಯವಿರುವ ಶಾಸಕರ ಮೇಲೆ ವಿಶೇಷ ಕಣ್ಗಾವಲು ಹಾಕಬೇಕು. ಅವರನ್ನು ಸಂಪರ್ಕಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸಬಬೇಕು ಎಂದು ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.
ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಆ ಜಿಲ್ಲೆಯ ಉಭಯ ಪಕ್ಷಗಳ ಶಾಸಕರ ಸಂಪರ್ಕ ಬೆಳೆಸಿಕೊಂಡು ಅವರ ಬೇಡಿಕೆ ಈಡೇರಿಸಬೇಕು. ಯಾವುದೇ ಕಾರಣಕ್ಕೆ ಅವರಲ್ಲಿ ಅತೃಪ್ತಿ ಮೂಡದಂತೆ ಎಚ್ಚರವಹಿಸಬೇಕು ಎಂದು ಮುಖ್ಯಮಂತ್ರಿ ಸಲಹೆ ಮಾಡಿದರು ಎನ್ನಲಾಗಿದೆ.
ಈ ಮಧ್ಯೆ ಬಿಜೆಪಿ ವಿರುದ್ಧ ದಂಗೆ ಹೇಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಅವರು ನೀಡಿರುವ ಹೇಳಿಕೆ ಬಗ್ಗೆಯೂ ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಕುರಿತು ಕಾಂಗ್ರೆಸ್‍ನ ಕೆಲವು ಹಿರಿಯ ಸಚಿವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ಸೂಚಿಸಿದರು. ಬಿಜೆಪಿಯವರು ಆಪರೇಷನ್ ಕಮಲ ಮುಂದುವರೆಸಿದರೆ ಅವರ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ನೀಡಬೇಕಾಗುತ್ತದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಸರ್ಕಾರದ ಬಗ್ಗೆ ತಪ್ಪು ಸಂದೇಶ ರವಾನೆಗೆ ಕಾರಣವಾಗುತ್ತದೆ. ಮುಖ್ಯಮಂತ್ರಿಯಾಗಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಮುಖ್ಯಮಂತ್ರಿ ಅವರು ಸಂಯಮದಿಂದ ವರ್ತಿಸಬೇಕಿತ್ತು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








