ನವದೆಹಲಿ
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಮಂಗಳವಾರ ತಡರಾತ್ರಿಯಿಂದ ಬುಧವಾರ ನಸುಕಿನ ಜಾವ ದಾಳಿ ನಡೆಸಿದೆ. ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ರಾತ್ರಿಯಿಡೀ ಕಾರ್ಯಾಚರಣೆಯ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದಾರೆ. ಇದರ ಜತೆಗೆ, ಪ್ರಧಾನಿ ಮೋದಿ ಇಂದು ಬೆಳಿಗ್ಗೆ 11 ಗಂಟೆಗೆ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆ ಕರೆದಿದ್ದಾರೆ.
ಸರ್ಕಾರಿ ಮೂಲಗಳ ಪ್ರಕಾರ, ಪ್ರಧಾನ ಮಂತ್ರಿಯವರೇ ಈ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಿದ್ದಾರೆ. ಅವರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥರು, ಹಿರಿಯ ಗುಪ್ತಚರ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನಿರಂತರವಾಗಿ ಮಾಹಿತಿ ನೀಡುತ್ತಿದ್ದರು. ಪಹಲ್ಗಾಮ್ ದಾಳಿಯ ನಂತರ ಪ್ರಧಾನಿ ಮೋದಿ ಅವರು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರ ನಡುವೆ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದ್ದರು ಎಂಬುದು ಗಮನಾರ್ಹ.
ದಾಳಿಯ ನಂತರ ರಕ್ಷಣಾ ಸಚಿವಾಲಯವು ಬೆಳಗಿನ ಜಾವ 1:44 ಕ್ಕೆ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ದಾಳಿ ಪ್ರಚೋದನಕಾರಿಯಾಗಿಲ್ಲ ಎಂದು ಹೇಳಿದೆ. ಭಾರತೀಯ ಸೇನೆ ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿಲ್ಲ. ನಮ್ಮ ದಾಳಿಗಳು ನಿರ್ದಿಷ್ಟವಾಗಿ ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳ ಮೇಲೆ ನಡೆದಿವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಭಾರತೀಯ ಸೇನೆ ಗುರಿ ಮಾಡಿದ ಪ್ರದೇಶವು ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಭದ್ರಕೋಟೆಯಾಗಿರುವ ಬಹವಾಲ್ಪುರವನ್ನು ಸಹ ಒಳಗೊಂಡಿದೆ. ಬಹಾವಲ್ಪುರದಲ್ಲಿರುವ ಜೈಷ್-ಎ-ಮೊಹಮ್ಮದ್ (ಜೆಇಎಂ) ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ (ಎಲ್‌ಇಟಿ) ಪ್ರಧಾನ ಕಚೇರಿ ಸೇರಿದಂತೆ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಪಾಕಿಸ್ತಾನದ 9 ಸ್ಥಳಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ. ಇವುಗಳಲ್ಲಿ 4 ಪಾಕಿಸ್ತಾನದಲ್ಲಿ ಮತ್ತು 5 ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇವೆ.
ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ
- ಮುಜಫರಾಬಾದ್
- ಕೋಟ್ಲಿ
- ಗುಲ್ಪುರ್
- ಬಿಂಬರ್
ಪಾಕಿಸ್ತಾನ
- ಸಿಯಾಲ್‌ಕೋಟ್
- ಚಕ್ ಅಮರು
- ಮುರಿಡ್ಕೆ
- ಬಹವಾಲ್ಪುರ್ (02)
