ಉಡುಪಿ:
ಕರಾವಳಿ ಗಂಡು ಕಲೆ ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗದ ನಡುವೆ ಪ್ರಸಕ್ತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳು ನಡೆಯುತ್ತವೆ. ಇಂತಹ ಸಂಭಾಷಣೆ ಪ್ರೇಕ್ಷಕರ ಗಮನ ಸೆಳೆಯುತ್ತಿರುತ್ತದೆ. ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿರುವ ನಡುವೆ ಪಾವಂಜೆ ಮೇಳದಲ್ಲಿ ಕಲಾವಿದ ದಿನೇಶ್ ಶೆಟ್ಟಿ ಅವರು ʼಆಪರೇಷನ್ ಸಿಂದೂರʼದ ಬಗ್ಗೆ ಮಾತನಾಡಿದ್ದು, ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಶಾಸಕ ಸುನಿಲ್ ಕುಮಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಆಪರೇಷನ್ ಸಿಂದೂರದ ಬಗ್ಗೆ ಮಾತನಾಡುವುದನ್ನು ನೋಡಬಹುದು. ಈ ಪವಿತ್ರವಾದ ನೆಲದಲ್ಲಿ ನಾನು ಹುಟ್ಟಿದವ. ಪವಿತ್ರವಾದ ಸಂಸ್ಕಾರವನ್ನು ಪಡೆದವ. ಈ ನೆಲಕ್ಕೆ ತಾಯಿಯೆಂದು ನಾವು ಕರೆಯುತ್ತೇವೆ. ತಾಯಿಯೆಂದು ಕರೆಯುವ ಈ ನೆಲ ಇದು ಬಿಟ್ರೆ ಇನ್ನೊಂದಿಲ್ಲ. ಹೀಗಾಗಿ ನಮಗೆ ದೇಶ ಪ್ರೇಮವನ್ನು ಕಲಿಸಿದೆ, ಆದರೆ ದೇಶದ್ರೋಹ ಮಾಡುವುದನ್ನು ಕಲಿಸಲಿಲ್ಲ ಎಂದು ಹೇಳುತ್ತಾರೆ.
ಈ ವೇಳೆ ಸ್ತ್ರಿ ವೇಷದಾರಿಯೊಬ್ಬರು ಈ ತಾಯಿಯ ಸಿಂದೂರ ಅಳಿಸಲು ಬಂದರೆ ಏನು ಮಾಡೋದು ಎಂದಿದ್ದಾರೆ. ಇದೇ ವೇಳೆ ಕಲಾವಿದ ದಿನೇಶ್ ಶೆಟ್ಟಿ, ತಾಯಿಯ ಸಿಂದೂರವನ್ನು ಒರೆಸುತ್ತೇನೆಂದು ಬಂದರೆ, ಈ ನೆಲದ ಒಬ್ಬಳು ಹೆಣ್ಣಿನ ಸಿಂದೂರ ಒರೆಸಿದರೆ ವೈರಿಗಳ ಸಾವಿರ ಸಾವಿರ ಮಡದಿಯರ ಸಿಂದೂರ ಅಳಿಸುವುದಕ್ಕೆ ನಾವೆಲ್ಲಾ ಸಿದ್ಧರಾಗಿ ನಿಂತಿದ್ದೇವೆ ಎಂದು ಹೇಳುತ್ತಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಈ ಬಗ್ಗೆ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, ಯಕ್ಷಗಾನ ಸದಾ ಅಪ್ಡೇಟ್ ಆಗಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಭಾರತಾಂಬೆ ಎಂದೆಂದೂ ಅಮರ ಸಿಂದೂರ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಸೂಪರ್ ಎಂದು ಕಲಾವಿದರ ಮೈ ರೋಮಾಂಚನಕಾರಿ ಮಾತುಗಾರಿಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








