ಮುರ್ಷಿದಾಬಾದ್:
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾಗೆ ಸಮನ್ಸ್ ನೀಡಿರುವ ಕೇಂದ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯವನ್ನು ‘ಈಡಿಯಟ್’ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಗುರುವಾರ ಕರೆದಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಚೌಧರಿ, ಇಡಿ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ ಎಂದು ಆರೋಪಿಸಿದರು. ಯಾರಿಗೆ ಸಮನ್ಸ್ ನೀಡಬೇಕು, ಯಾರಿಗೆ ಕೊಡಬಾರದು ಎಂದು ಅದರ ಸ್ವಂತ ವಿಷಯವಾಗಿದೆ. ಇಡಿ ಈಡಿಯಟ್’ ಎಂಬುದು ನಮಗೆ ಗೊತ್ತಿದೆ. ಅದು ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದು ಫಾರೂಕ್ ಅಬ್ದುಲ್ಲಾ ವಿರುದ್ಧದ ಪಿತೂರಿಯೇ ಹೊರತು ಬೇರೇನೂ ಅಲ್ಲ. ಅವರೊಬ್ಬ ಹೆಸರಾಂತ ರಾಜಕಾರಣಿ” ಎಂದು ಹೇಳಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ಫಾರೂಕ್ ಅಬ್ದುಲ್ಲಾ ಅವರನ್ನು ವಿಚಾರಣೆಗೆ ಕರೆದಿದೆ. ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಹಣ ದುರ್ಬಳಕೆಯ ತನಿಖೆಯ ಭಾಗವಾಗಿ ಅಬ್ದುಲ್ಲಾಗೆ ಸಮನ್ಸ್ ನೀಡಲಾಗಿದೆ. ಈ ಪ್ರಕರಣದಲ್ಲಿ 2022 ಜುಲೈನಲ್ಲಿ ಅಬ್ದುಲ್ಲಾ ವಿರುದ್ಧ ಇಡಿ ಪೂರಕ ಜಾರ್ಜ್ ಶೀಟ್ ಸಲ್ಲಿಸಿತ್ತು.