ಬೆಂಗಳೂರು
ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಕಾಂಗ್ರೆಸ್ ಸಚಿವರು ನೂರಾರು ಕೋಟಿ ಭೂಹಗರಣದ ಬಾಂಬ್ ಸಿಡಿಸಿದ್ದಾರೆ. ಅಶೋಕ್ ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣವನ್ನು ದಾಖಲೆ ಸಮೇತ ಸಚಿವರು ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಕಾನೂನು ಸಚಿವ ಸಚಿವ ಹೆಚ್ ಕೆ ಪಾಟೀಲ್ ಅವರು ದಾಖಲೆ ಬಿಡುಗಡೆ ಮಾಡಿ, ಅಶೋಕ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರವಾಗಿ ಬಂದಿದ್ದ 14 ನಿವೇಶನಗಳನ್ನು ವಾಪಸ್ ನೀಡಲಾಗಿದೆ.
ಈ ಬಗ್ಗೆ ಆರ್ ಅಶೋಕ್ ಬೇರೆ ಅರ್ಥ ಕಲ್ಪಿಸಿ, ತಪ್ಪು ಮಾಡಿರುವ ಕಾರಣ ವಾಪಸ್ ನೀಡಿದ್ದೀರಿ ಎಂದು ಆರೋಪ ಮಾಡಿದ್ದಾರೆ. ಆರ್ ಅಶೋಕ್ ಅವರು ಲೊಟ್ಟೆ ಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ಭೂ ಹಗರಣ ಮಾಡಿದ್ದು ನೆನಪಿಲ್ಲವೇ ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದರು.
ಕಳೆದ ಕೆಲ ದಿನಗಳಿಂದ ಮುಡಾ ಬಗ್ಗೆ ಚರ್ಚೆಯಾಗ್ತಿದೆ. ಮುಖ್ಯಮಂತ್ರಿಗಳ ಪತ್ನಿ ಮುಡಾಗೆ ನಿವೇಶನಗಳನ್ನ ವಾಪಸ್ ಮಾಡಿದ್ದಾರೆ. ಆದರೂ ಬಿಜೆಪಿಯ ಮುಖಂಡರು ವಾಪಸ್ ಕೊಟ್ಟಿರೋದೆ ಸರಿಯಿಲ್ಲ. ತಪ್ಪನ್ನ ಒಪ್ಪಿಕೊಂಡಂತಾಯ್ತು ಅಂತಾ ಬೇರೆ ಬೇರೆ ಅರ್ಥದಲ್ಲಿ ಮಾತಾಡ್ತಿದ್ದಾರೆ. ಆದ್ರೆ ವಿಪಕ್ಷ ನಾಯಕ ಆರ್. ಅಶೋಕ್ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮಾಡಿರೋದೆ ತಪ್ಪು. ಸರ್ಕಾರದ ಜಾಗ ಕಬಳಿಸಿ ಒಪ್ಪಿಕೊಂಡಾಯ್ತು ಅಂತಾ ಅವರದೇ ಭಾಷೆಯಲ್ಲಿ ಮಾತಾಡಿದ್ದಾರೆ. ಅವರ ಅವಧಿಯಲ್ಲಾದ ಹಗರಣದ ಬಗ್ಗೆ ರಾಜ್ಯದ ಜನರ ಮುಂದಿಡೋಕೆ ಬಂದಿದ್ದೀವಿ ಎಂದು ಹೇಳಿದರು.