ಬೆಳಗಾವಿ:
‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ಸರಕಾರ ಅಭಿವೃದ್ದಿಯನ್ನು ಸಂಪೂರ್ಣ ಕಡೆಗಣಿಸಿ, ಕೇವಲ ಸಲಹೆ ಪಡೆದುಕೊಳ್ಳುವುದರಲ್ಲೇ ಸಮಯ ವ್ಯರ್ಥ ಮಾಡುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿಯ ಸದಸ್ಯರು, ಆಡಳಿತ ಪಕ್ಷವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆ ಕುರಿತು ಪ್ರಶ್ನೆ ಕೇಳಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉತ್ತರ ನೀಡಿದರು.
‘ಡಿ.ಕೆ.ಶಿವಕುಮಾರ್ ಅವರು ‘ಬ್ರ್ಯಾಂಡ್ ಬೆಂಗಳೂರು’ ಕಲ್ಪನೆಯನ್ನು ಸಾಕಾರಗೊಳಿಸಲು ಆಸಕ್ತಿ ತೋರಿಸಿದ್ದಾರೆ. ಸುಮಾರು 70 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿವೆ. ಅವುಗಳನ್ನು ಕ್ರೂಢೀಕರಿಸಲು 8 ಶೈಕ್ಷಣಿಕ ಸಂಸ್ಥೆಗಳನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸಚಿವರು ಉತ್ತರ ಆರಂಭಿಸುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್, ಸತೀಶ್ ರೆಡ್ಡಿ, ಎಸ್.ಆರ್. ವಿಶ್ವನಾಥ್ ಮತ್ತಿತರರು, ‘ಯಾವ ಕಾರಣಕ್ಕಾಗಿ ಈ ಪ್ರಶ್ನೆ ಕೇಳಿದ್ದೀರಿ? ಪ್ರಚಾರ ಕೊಡಿಸುವುದಕ್ಕಾ’ ಎಂದು ಛೇಡಿಸಿದರು.
‘ಈ ಸರ್ಕಾರ ಬಂದ ನಂತರ ಬೆಂಗಳೂರಿನಲ್ಲಿ ನಯಾಪೈಸೆ ಕಾಮಗಾರಿ ನಡೆದಿಲ್ಲ. ಲೋಡ್ ಶೆಡ್ಡಿಂಗ್, ರಸ್ತೆಗಳ ಗುಂಡಿ, ಸಂಚಾರ ದಟ್ಟಣೆ ಹೆಚ್ಚಾಗಿದೆ. ಬ್ರ್ಯಾಂಡ್ ಬೆಂಗಳೂರು ಎಂದರೆ ಇದೇನಾ’ ಎಂದು ಪ್ರಶ್ನಿಸಿದರು.‘ಜನರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇದಕ್ಕೆ ಸಲಹೆಗಾರರು ಬೇಕಾ’ ಎಂದು ಬಿಜೆಪಿಯ ಮುನಿರತ್ನ ಕೇಳಿದರು.
ಬಿಜೆಪಿ ಸದಸ್ಯರ ಪ್ರಶ್ನೆಗಳಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರು ಪ್ರತ್ಯುತ್ತರ ಕೊಡಲಾರಂಭಿಸಿದರು. ‘ನಿಮ್ಮ ಕೈಯಲ್ಲಿ ಏನೂ ಆಗಲಿಲ್ಲ. ಈಗ ಕೆಲಸ ಮಾಡುವವರಿಗಾದರೂ ಬಿಡಿ’ ಎಂದು ಕಾಂಗ್ರೆಸ್‌ನ ಎಚ್.ಸಿ. ಬಾಲಕೃಷ್ಣ ಬಿಜೆಪಿ ಸದಸ್ಯರನ್ನುದ್ದೇಶಿಸಿ ಹೇಳಿದರು. ಈ ವೇಳೆ ವಾಕ್ಸಮರ ಜೋರಾಯಿತು. ಮಧ್ಯ ಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ