ಬೆಂಗಳೂರು:
ಆಪರೇಷನ್ ಸಿಂದೂರ್ ಮೂಲಕ ಪಾಕ್ ನೆಲದಲ್ಲಿದ್ದ ಭಯೋತ್ಪಾದಕರನ್ನು ಸೆದೆ ಬಡಿದಿರುವ ಭಾರತೀಯ ಸೇನೆ ಇದೀಗ ಕಾರ್ಯಚರಣೆಯ ಮಾಹಿತಿಯನ್ನು ಹಂಚಿಕೊಂಡಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಶನಿವಾರ ಭಾರತದ ವಾಯು ರಕ್ಷಣಾ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಗಳು ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ವಾಯುಗಾಮಿ ಕಣ್ಗಾವಲುಗಾಗಿ ವಿನ್ಯಾಸಗೊಳಿಸಲಾದ ವಿಶೇಷ ಮಿಲಿಟರಿ ವಿಮಾನವಾದ AEW&C/ELINT ವಿಮಾನವನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, S-400 ವಾಯು ರಕ್ಷಣಾ ವ್ಯವಸ್ಥೆಗಳಿಂದ ಪಾಕಿಸ್ತಾನದ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದರು. ಜಕೋಬಾಬಾದ್‌ನಲ್ಲಿ ನಿಲ್ಲಿಸಲಾಗಿದ್ದ ಕೆಲವು ಎಫ್ 16 ಜೆಟ್‌ಗಳು ಮತ್ತು ಭೋಲಾರಿಯಲ್ಲಿ ಒಂದು ಎಇಡಬ್ಲ್ಯೂ & ಸಿ ನಾಶವಾಗಿವೆ ಎಂದು ಅವರು ಹೇಳಿದರು. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಾವು ಆಪರೇಷನ್ ಸಿಂದೂರ್ ಕೈಗೊಂಡೆವು. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕ ನೆಲೆಗಳ ಮೇಲೆ ಮೊದಲು ದಾಳಿ ನಡೆಸಲಾಯಿತು. ಅದರ ಉಪಗ್ರಹ ಆಧಾರಿತ ಚಿತ್ರಗಳು ಹೊರಬಂದಿವೆ ಎಂದು ಅವರು ಏರ್ ಚೀಫ್ ಮಾರ್ಷಲ್ ಹೇಳಿದ್ದಾರೆ.
“ನಾವು ಮಾಡಿರುವ ಹಾನಿಯ ಪ್ರಮಾಣವನ್ನು ನಮ್ಮ ಜನರಿಗೆ ಮನವರಿಕೆ ಮಾಡಿಕೊಡಲು ನಮಗೆ ಸಾಧ್ಯವಾಗಲಿಲ್ಲ. ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂಬ ಗುಪ್ತಚರ ಮಾಹಿತಿ ನಮಗಿದೆ. ಇದು ಮುಗಿದ ನಂತರ, ಅವರು ಏನನ್ನಾದರೂ ಯೋಜಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ನಮಗೆ ಸಿಕ್ಕಿತು, ಆದ್ದರಿಂದ ನಾವು ಈಗಾಗಲೇ ಅದಕ್ಕೆ ಸಿದ್ಧರಾಗಿದ್ದೇವೆ. ಭಾರತದ ನಿಖರ ದಾಳಿಗಳ ಯಶಸ್ಸಿಗೆ ರಾಜಕೀಯ ಇಚ್ಛಾಶಕ್ತಿಯೇ ಕಾರಣ. ನಮಗೆ ಯಾವುದೇ ನಿರ್ಬಂಧ ಹೇರಿಲ್ಲ ಎಂದು ಅವರು ಹೇಳಿದ್ದಾರೆ.
ಆಪರೇಷನ್ ಸಿಂದೂರದ ಸಮಯದಲ್ಲಿ ಸರ್ಕಾರವು ಸಶಸ್ತ್ರ ಪಡೆಗಳ “ಕೈಗಳನ್ನು ಕಟ್ಟಿಹಾಕಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ ಬಳಿಕ ಈ ಹೇಳಿಕೆ ಬಂದಿದೆ. ಬಹವಾಲ್ಪುರ್ ಮತ್ತು ಮುರಿಡ್ಕೆಯ ಎರಡು ಪ್ರಧಾನ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ಅದ್ಭುತ ಕೆಲಸ ಮಾಡಿವೆ. ನಾವು ಇತ್ತೀಚೆಗೆ ಖರೀದಿಸಿದ್ದ S-400 ವ್ಯವಸ್ಥೆಯು ಗೇಮ್-ಚೇಂಜರ್ ಆಗಿದೆ. ನಮ್ಮ ಶಕ್ತಿ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಸಿಂಗ್ ಹೇಳಿದ್ದಾರೆ.
