OPS ಪುನರ್ ಸ್ಥಾಪನೆ : ರಾಜಸ್ಥಾನಕ್ಕೆ ಅಧ್ಯಯನ ಸಮಿತಿ : ಸಿಎಂ

ಬೆಂಗಳೂರು:

    ನೌಕರರ ಬಹುದಿನಗಳ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸುವ ವಿಚಾರ ಸಂಬಂಧ ಅಧ್ಯಯನ ನಡೆಸಲು ರಾಜಸ್ಥಾನ ರಾಜ್ಯಕ್ಕೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರವಾನಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

    ರಾಜ್ಯದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿಯೂ ಚುನಾವಣೆ ನಡೆಯಲಿದೆ. ಹೀಗಾಗಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತಿರುವ ಬಿಜೆಪಿ, ಯಾವುದೇ ರೀತಿಯಲ್ಲೂ ಎಡವಂತೆ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದೆ.

    ಒಂದು ವೇಳೆ ಒಪಿಎಸ್ ಬಗ್ಗೆ ಸರ್ಕಾರ ತದ್ವಿರುದ್ಧವಾಗಿ ನಿರ್ಧಾರ ತೆಗೆದುಕೊಂಡಿದ್ದೇ ಆದರೆ, ಅದು ಕೇವಲ ವಿಧಾನಸಭಾ ಚುನಾವಣೆಗಳಷ್ಟೇ ಅಲ್ಲ, ಮುಂದಿನ ಲೋಕಸಭಾ ಚುನಾವಣೆಯ ಮೇಲೂ ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ರಾಜಸ್ಥಾನದ ಅಧಿಕೃತ ಮೂಲಗಳ ಪ್ರಕಾರ, ಸಮಿತಿಯು ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅಖಿಲ್ ಅರೋರಾ, ಸಿಎಂ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಾಂಕಾ ಅವರನ್ನು ಭೇಟಿ ಮಾಡಲಿದೆ ಎಂದು ತಿಳಿದುಬಂದಿದೆ. ಸಮಿತಿಯು ಏಪ್ರಿಲ್ 30 ರೊಳಗೆ ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಬೇಕಾಗಿದೆ.ಹಳೆಯ ಪಿಂಚಣಿ ಯೋಜನೆಯು ವಿವಾದದ ಪ್ರಮುಖ ಅಂಶವಾಗಿ ಮಾರ್ಪಟ್ಟಿದ್ದು, ಕೇಂದ್ರದ ಬಿಜೆಪಿ ಆಡಳಿತ ಮತ್ತು ರಾಜಸ್ಥಾನ ಸರ್ಕಾರದ ನಡುವೆ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ