ಲಕ್ನೋ
ಐಪಿಎಲ್‌ನ(IPL 2026) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಫ್ರಾಂಚೈಸಿಯನ್ನು ಮಾರಾಟ ಮಾಡಲು ನಿರ್ಧರಿಸಿದ ಸುದ್ದಿ ಬೆನ್ನಲ್ಲೇ ಇದೀಗ ಮತ್ತೊಂದು ಫ್ರಾಂಚೈಸಿಯೂ ತನ್ನ ತಂಡವನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಚೊಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ಕೂಡ ಮಾರಟಕ್ಕಿದೆ ಎಂದು ಹರ್ಷ ಗೋಯೆಂಕಾ ಟ್ವೀಟ್ ಮಾಡಿದ್ದಾರೆ. 2008 ರ ಐಪಿಎಲ್ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ ಹೊಸ ಮಾಲೀಕರ ಹುಡುಕಾಟದಲ್ಲಿದೆ ಎಂದು ಅವರು ಹೇಳಿದ್ದಾರೆ.
ಹರ್ಷ್ ಎಕ್ಸ್‌ಗೆ ಟ್ವೀಟ್ ಪೋಸ್ಟ್ ಮಾಡಿ, “ಐಪಿಎಲ್‌ನಲ್ಲಿ ಒಂದಲ್ಲ, ಎರಡು ತಂಡಗಳು ಮಾರಾಟಕ್ಕೆ ಸಿದ್ಧವಾಗಿವೆ ಎಂದು ನಾನು ಕೇಳಿದ್ದೇನೆ. ಅದು ಆರ್‌ಸಿಬಿ ಮತ್ತು ರಾಜಸ್ಥಾನ್. ಮಾರಾಟಕ್ಕೆ ಎರಡು ತಂಡಗಳು ಮತ್ತು 4/5 ಸಂಭಾವ್ಯ ಖರೀದಿದಾರರು ಸಿದ್ಧರಾಗಿದ್ದಾರೆ. ಯಶಸ್ವಿ ಖರೀದಿದಾರರು ಯಾರು? ಪುಣೆ, ಅಹಮದಾಬಾದ್, ಮುಂಬೈ, ಬೆಂಗಳೂರು ಅಥವಾ ಯುಎಸ್‌ಎಯಿಂದ ಬಂದವರಾಗಿರುತ್ತಾರೆಯೇ?” ಎಂದು ಬರೆದಿದ್ದಾರೆ.
ಜೈಪುರ ಮೂಲದ ಫ್ರ್ಯಾಂಚೈಸಿಯನ್ನು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ (ಎಮರ್ಜಿಂಗ್ ಮೀಡಿಯಾ ಸ್ಪೋರ್ಟಿಂಗ್ ಹೋಲ್ಡಿಂಗ್ಸ್ ಲಿಮಿಟೆಡ್) ಒಡೆತನದಲ್ಲಿದೆ ಎಂದು 2024 ರಲ್ಲಿ ವರದಿಯಾಗಿದೆ. ಇದು 65% ಪಾಲನ್ನು ಹೊಂದಿದೆ. ಈಗಾಗಲೇ ರಾಜಸ್ಥಾನ್ ರಾಯಲ್ಸ್‌ನ ಸಿಇಒ ಜೇಕ್ ಲುಸ್ ಮ್ಯಾಕ್ರಮ್ ಫ್ರಾಂಚೈಸಿಯಿಂದ ಬೇರ್ಪಟ್ಟಿದ್ದಾರೆ. ಹೀಗಾಗಿ ಫ್ರಾಂಚೈಸಿ ಮಾರಾಟವಾಗುವ ವರದಿಯನ್ನು ಅಲ್ಲಗಳೆಯುವಂತಿಲ್ಲ.
ನವೆಂಬರ್ 5 ರಂದು ಡಿಯಾಜಿಯೊ ಆರ್‌ಸಿಬಿಯನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದಾಗಿ ದೃಢಪಡಿಸಿತು. ಅಕ್ಟೋಬರ್ 1 ರಂದು ಆದಾರ್ ಪೂನವಲ್ಲಾ ಅವರ ಎಕ್ಸ್ ಪೋಸ್ಟ್ ಬೆಂಗಳೂರು ಫ್ರಾಂಚೈಸಿ ಮಾರಾಟಕ್ಕೆ ಸಿದ್ಧವಾಗಿದೆ ಎಂದು ಮೊದಲು ಸುಳಿವು ನೀಡಿತ್ತು. ಆರ್‌ಸಿಬಿ ಖರೀದಿಗೆ ಜೆರೋದಾ ಸಂಸ್ಥೆಯ ಸಹ ಸ್ಥಾಪಕ ನಿಖಿಲ್ ಕಾಮತ್ ಹಾಗೂ ಮಣಿಪಾಲ್ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್ (ಎಂಇಎಂಜಿ) ಮುಖ್ಯಸ್ಥ ರಂಜನ್ ಪೈ ಆರ್‌ಸಿಬಿ ಖರೀದಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಇವರ ಜತೆಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಕೂಡ ಒಲವು ಹೊಂದಿದ್ದು, ಮೂವರನ್ನು ಒಳಗೊಂಡ ತಂಡವು ಖರೀದಿಗೆ ಬಿಡ್ ಸಲ್ಲಿಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಆರ್‌ಸಿಬಿಯನ್ನು ಬರೋಬ್ಬರಿ 2 ಬಿಲಿಯನ್ ಡಾಲರ್(ಅಂದಾಜು 17700 ಕೋಟಿ ರು.ಗೆ) ಗೆ ಮಾರಾಟ ಮಾಡಲು ಡಿಯಾಜಿಯೋ ಮುಂದಾಗಿದೆ. ಫೋರ್ಬ್ಸ್ ವರದಿ ಪ್ರಕಾರ, ಪೂನಾವಾಲಾ ಮತ್ತು ಕುಟುಂಬದ ನಿವ್ವಳ ಮೌಲ್ಯ 1.7 ಲಕ್ಷ ಕೋಟಿ ಇದೆ. ಇನ್ನು ರಂಜನ್ ಪೈ 24000 ಕೋಟಿ, 22000 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ.







