ರೈತರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ : ಡಿಸಿಎಂ

ಬೆಂಗಳೂರು:

    ಮುಂದಿನ 15 ದಿನಗ4ಳವರೆಗೆ ತಮಿಳುನಾಡಿಗೆ ಪ್ರತಿನಿತ್ಯ 15 ಸಾವಿರ ಕ್ಯೂಸೆಕ್​ ನೀರು ಹರಿಸಬೇಕೆಂಬ ಸೆ.12ರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ ಆದೇಶವನ್ನು ಪ್ರಶ್ನಿಸಿ ಮಂಗಳವಾರ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.

    ತಮಿಳುನಾಡಿಗೆ ಕಾವೇರಿ ನೀರುವ ಹರಿಸುವ ವಿಚಾರವಾಗಿ ನಾವು ಯಾವ ಸಮಯದಲ್ಲಿ ಬೇಕಾದರೂ ದೆಹಲಿಗೆ ಭೇಟಿ ನೀಡಲು ಸಿದ್ದರಿದ್ದೇವೆ. ರಾಜ್ಯದ ಸಂಸದರು ಹಾಗೂ ಮುಖ್ಯಮಂತ್ರಿಗಳು ಶೀಘ್ರವೇ ಒಂದು ದಿನಾಂಕ ನಿಗದಿ ಮಾಡೋಣ ಎಂದಿದ್ಧಾರೆ. ರಾಜ್ಯದ ಸಂಸದರು ರಾಜಕೀಯ ಬಿಟ್ಟು ಸಹಾಯ ಮಾಡುವುದಾಗಿ ಹೇಳಿದ್ದಾರೆ.

     ನಾವು ಕಳೆದ ಎರಡು ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ನೀರನ್ನು ಬಿಟ್ಟಿದ್ದೇವೆ. CWRCನವರು ಐದು ಸಾವಿರ ಕ್ಯೂಸೆಕ್​ ನೀರು ಹರಿಸಿ ಎಂದು ಹೇಳುತ್ತಾರೆ. ಆದರೆ, ಅಲ್ಲಿ ತಲುಪುವುದು 2-3 ಸಾವಿರ ಕ್ಯೂಸೆಕ್​ ಮಾತ್ರ. ಈ ಸಂಬಂಧ ಪ್ರಧಾನಿ ಕಚೇರಿಗೆ ಎರಡು ಬಾರಿ ಪತ್ರ ಬರೆದಿದ್ದೇವೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ನಾವು ಕಾಯುತ್ತೇವೆ.

     ಮಾಜಿ ಪ್ರಧಾನಿ ದೇವೇಗೌಡರ ಸಲಹೆ ಕುರಿತು ಪ್ರತಿಕ್ರಿಯಿಸಿ, ಅವರ ಸಲಹೆಯಲ್ಲಿ ಒಂದು ಅರ್ಥವಿದೆ, ಒಂದು ಗೌರವವಿದೆ. ನಾವು ಅವರ ಸಲಹೆಯನ್ನು ಕೇಳುತ್ತೇವೆ. ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಮೇಕೆದಾಟು ಯೋಜನೆ ಒಂದೇ ಪರಿಹಾರ. ಸುಪ್ರೀಂ ಕೋರ್ಟ್​ ನಾವು ತಾಂತ್ರಿಕ ವಿಚಾರಗಳಲ್ಲಿ ತಲೆ ಹಾಕುವುದಿಲ್ಲ ಎಂದಿದ್ದಕ್ಕೆ ನಾವು ಕೇಂದ್ರ ಜಲ ಆಯೋಗದ ಬಲಿ ಹೋಗಬೇಕಾಯಿತು.

    ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್​ ಕುರಿತು ಪ್ರತಿಕ್ರಿಯಿಸಿ ಹೌದು ಅವರು ಹೇಳುವುದರಲ್ಲಿ ನಿಜ ಇದೆ. ನಾವು ನೀರು ಬಿಡದೆ ಇದ್ದರೆ ಸುಪ್ರೀಂ ಕೋರ್ಟ್​ ಅದನ್ನು ಪ್ರಶ್ನೆ ಮಾಡುತ್ತದೆ. ಸಮಿತಿ ಮಾತನ್ನು ಪಾಲಿಸದೆ ಇರುವವರು ಇಲ್ಲಿಗೆ ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿದಾಗ ನಮ್ಮ ವಾದ ಬಿದ್ದು ಹೋಗುತ್ತದೆ. ಆಗ ಏನು ಮಾಡುವುದು ಎಂದು ಪ್ರಶ್ನಿಸಿದ್ಧಾರೆ.

    ಮಾಜಿ ಸಿಎಂ ಬೊಮ್ಮಾಯಿ ಅವರು ಸುಪ್ರೀಂ ಕೋರ್ಟ್​ ಇದೆ ಎಂದು ಹೇಳುತ್ತಾರೆ ಅಷ್ಟೇ. ಆದರೆ, ನೀರಿನ ಹಂಚಿಕೆ ಕುರಿತು ಸೂತ್ರ ಹೊಂದಾಣಿಕೆಯಾಗಿಲ್ಲದೆ ಹೇಗೆ ಮುಂದುವರಿಯಬೇಕು. ಇಲ್ಲಿ ರಾಜ್ಯವೂ ಉಳಿಯಬೇಕು ಆದೇಶ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ. ಒಂದು ವೇಳೆ ನಾವು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದರೆ ಕಾವೇರಿ ನದಿ ನೀರು ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಯೋಚನೆ ಮಾಡುತ್ತೇವೆ.

    ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನಾವು ಸುಪ್ರೀಂ ಕೋರ್ಟ್​ನಲ್ಲಿ ಬಲವಾಗಿ ವಾದ ಮಂಡಿಸುತ್ತೇವೆ. ಎರಡು ರಾಜ್ಯಗಳಿಗೆ ಭೇಟಿನೀಡಿ ಪರಿಸ್ಥಿತಿ ಅವಲೋಕಿಸಿ ಆನಂತರ ತೀರ್ಪು ನೀಡಿ ಎಂದು ನ್ಯಾಯಪೀಠಕ್ಕೆ ಮನವಿ ಮಾಡುತ್ತೇವೆ. ನಾನು ಈ ಸಂಬಂಧ ಕೇಂದ್ರ ಜಲ ಸಚಿವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದೇನೆ. ತಮಿಳುನಾಡಿನವರು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬೀಳದ ಪರಿಣಾಮ ನೀರಿನ ಹರಿವು ಕಡಿಮೆಯಾಗಿದೆ. ಕುಡಿಯುವ ನೀರಗೂ ತೊಂದರೆಯಾಗುತ್ತದೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುತ್ತೇವೆ.

    ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ನಾವು ರಾಜ್ಯದ ಹಾಗೂ ರೈತರ ಹಿತಾಸಕ್ತಿಗೆ ಬದ್ದವಾಗಿದ್ದು, ಇದು ನಮ್ಮ ಮೊದಲ ಆದ್ಯತೆ. ಕುಡಿಯುವ ನೀರಿಗೆ ಯಾವುದೇ ತೊಂದೆಯಾಗುವುದಿಲ್ಲ, ರೈತರ ಬೆಳೆಗಳಿಗೆ ನೀರು ಹರಿಸಲಾಗುವುದು. ರೈತರು ನದಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲದ್ದಕ್ಕೂ ಕಾದು ನೋಡಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link