ಹಾಸನ:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಗೊಂದಲ ನಿವಾರಣೆಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಪ್ರವೇಶಿಸಿದ್ದಾರೆ.
ಮೈತ್ರಿ ಅಭ್ಯರ್ಥಿಗೆ ಪ್ರೀತಂಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿಲ್ಲ. ನಮ್ಮ ಕಾರ್ಯಕರ್ತರು ಪೂರ್ತಿ ಶಕ್ತಿಯೊಂದಿಗೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಆಗುವುದನ್ನು ಕಾಯುತ್ತಾ ಇದ್ದಾರೆ. ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಐದು ಲಕ್ಷ ಮತಗಳು ಬಂದಿದ್ದವು. ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಮತಗಳು ಸೇರಿ ಹತ್ತು ಲಕ್ಷ ಮತಗಳು ಸಿಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ಘೋಷಣೆ ಆಗುವ ಮುಂಚೆ ಆಡುವ ಮಾತುಗಳಿಗೆ ಮಹತ್ವ ಕೊಡಬೇಕಿಲ್ಲ. ಅಭ್ಯರ್ಥಿ ಘೋಷಣೆ ನಂತರ ಕಾರ್ಯಕರ್ತರು ಏನು ಮಾಡುತ್ತಾರೆ ನೋಡಬೇಕು. ಬಿಜೆಪಿ ಕಾರ್ಯಕರ್ತರ ಭಾವನೆ ಹೆಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ತಲುಪಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಯಾರು ಆಗುತ್ತಾರೆ ಅನ್ನೋದನ್ನು ಬಿಜೆಪಿ ತೀರ್ಮಾನಿಸುವುದಿಲ್ಲ. ಅದನ್ನು ಜೆಡಿಎಸ್ ತೀರ್ಮಾನಿಸುತ್ತದೆ. ಜೆಡಿಎಸ್ ಯಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತದೆಯೋ ಅವರ ಪರವಾಗಿ ಬಿಜೆಪಿಯ ಎಲ್ಲಾ ಶಾಸಕರು, ಕಾರ್ಯಕರ್ತರು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತಾರೆ ಎಂದರು.
ಕರ್ನಾಟಕ ರಾಜ್ಯದಲ್ಲಿ 28ಕ್ಕೆ 28 ಸೀಟ್ ನಾವು ಗೆದ್ದಿದ್ದೇವೆ. 25 ಸೀಟ್ ಬಿಜೆಪಿ ಹಾಗೂ 3 ಸೀಟ್ ಜೆಡಿಎಸ್ ಕೊಟ್ಟಿದ್ದೇವೆ. ಕಾಂಗ್ರೆಸ್‌ಗೆ ಯಾವುದೂ ಉಳಿದಿಲ್ಲ. ಕಾಂಗ್ರೆಸ್ ನವರು ಒಂದೇ ಒಂದು ಸೀಟ್ ಗೆಲ್ಲಲ್ಲ. ನಾನು ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಒಂದು ತಿಂಗಳಿನಿಂದ ಪ್ರವಾಸ ನಡೆಸುತ್ತಿದ್ದೇನೆ. ಅದೇ ಉದ್ದೇಶದಿಂದ ವಾಸ್ತವ ಸ್ಥಿತಿ ಹಾಸನಕ್ಕೆ ಬಂದಿದ್ದೇನೆ. ಎಲ್ಲಾ ಕಡೆ ಪ್ರಧಾನಿ ಮೋದಿಯವರಿಗೆ ಅಭೂತಪೂರ್ವ ಬೆಂಬಲ ದೊರಕಿದೆ. ಜನರು ಮೋದಿಜಿಯವರಿಗೆ ಮತ ಹಾಕಲು ಹಾತೊರೆಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಅಂತರ ತುಂಬಾ ದೊಡ್ಡ ಮಟ್ಟದಲ್ಲಿ ಇರಲಿದೆ. ನಮಗೂ ಕಾಂಗ್ರೆಸ್‌ಗೂ ಗೆಲುವಿನಲ್ಲಿ ದೊಡ್ಡ ಮಟ್ಟದಲ್ಲಿ ಅಂತರವಿದೆ ಎಂದು ಹೇಳಿದರು.