ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ

ತುಮಕೂರು:

ಜಿಲ್ಲಾ ನಿರ್ದೇಶಕರಾಗಿ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ ಆಯ್ಕೆ 

   ಜಿದ್ದಾಜಿದ್ದಿನ ಕಣವಾಗಿದ್ದ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ ಅವರು ಅತ್ಯಧಿಕ ಮತಗಳಿಕೆಯೊಂದಿಗೆ ಆಯ್ಕೆಯಾಗಿದ್ದಾರೆ.

ಡಿ. 12 ರಂದು ರಾಜ್ಯ ಒಕ್ಕಲಿಗರ ಸಂಘದ 2 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಗೆ 7 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಒಕ್ಕಲಿಗ ಸಮುದಾಯದ ಮತದಾರರು ,ಆರ್.ಹನುಮಂತರಾಯಪ್ಪ ಮತ್ತು ಲೋಕೇಶ್ ಡಿ. ನಾಗರಾಜಯ್ಯ ಅವರ ಕೈ ಹಿಡಿದಿದ್ದು, ಸಿರಾ ಗೇಟ್ ರಸ್ತೆಯ ಕಾಳಿದಾಸ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ2 ಗಂಟೆ ಬಳಿಕ ಫಲಿತಾಂಶ ಪ್ರಕಟಿಸಲಾಯಿತು.

ನಗರದ ಹೊರವಲಯದ ಸಿರಾ ಗೇಟ್ ಬಳಿ ಇರುವ ಕಾಳಿದಾಸ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆದು ಮಧ್ಯಾಹ್ನ 2 ಗಂಟೆ ಬಳಿಕ ಫಲಿತಾಂಶ ಹೊರ ಬಿದ್ದಿದ್ದು, ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ,ಆರ್, ಹನುಮಂತರಾಯಪ್ಪ ಅವರು 14901 ಮತಗಳನ್ನು ಪಡೆದು ಮೊದಲ ಗೆಲುವು ಸಾಧಿಸಿದರೆ, ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಲೋಕೇಶ್ ಡಿ. ನಾಗರಾಜಯ್ಯ ಅವರು 11027 ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದರು.ಎಣಿಕೆ ಕೇಂದ್ರದ ಹೊರಗಡೆ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.

ತೀವ್ರ ಸ್ಪರ್ಧೆಯೊಡ್ಡಿದ್ದ ಬೆಳ್ಳಿ ಲೋಕೇಶ್, ಸುಜಾತ ನಂಜೇಗೌಡ ಸೋಲು: ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ತೀವ್ರ ಪೈಪೋಟಿಯೊಡ್ಡಿದ್ದ ಯುವ ಮುಖಂಡ ಬೆಳ್ಳಿ ಲೋಕೇಶ್ 8022 ಮತ, ಏಕೈಕ ಮಹಿಳಾ ಅಭ್ಯರ್ಥಿ ಸುಜಾತ ನಂಜೇಗೌಡ 6261 ಮತ ಹಾಗೂ ಡಾ.ಸಿ.ಕೆ.ಎಂ.ಗೌಡ 4042 ಮತ, ಕಪನಿಗೌಡ 211 ಮತ, ಶಿವರಾಮಯ್ಯ 137 ಮತ ಪಡೆದು ಪರಾಭವಗೊಂಡರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮಾತನಾಡಿದ, ಆರ್, ಹನುಮಂತರಾಯಪ್ಪ ಅವರು, ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ. ಜಿಲ್ಲೆಯಲ್ಲಿ ಒಕ್ಕಲಿಗರ ಭವನ ನಿರ್ಮಾಣ, ಆಸ್ಪತ್ರೆ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಮೂಲಕ ಜನಾಂಗದವರ ಋಣ ತೀರಿಸಲು ಶ್ರಮ ವಹಿಸಿ ಕೆಲಸ ಮಾಡುವುದಾಗಿ ಅವರು ಹೇಳಿದರು.ನನಗೆ ತುಂಬಾ ಸಂತಸವಾಗುತ್ತಿದೆ.

ಕುಲಬಾಂಧವರು ನಮ್ಮ ಕೈ ಹಿಡಿದು ನಮ್ಮ ಬಗ್ಗೆ ಒಲವು ತೋರಿಸಿದ್ದಾರೆ. ನಮ್ಮ ಬಗ್ಗೆ ಅತಿಯಾದ ಪ್ರೀತಿ ವಿಶ್ವಾಸ ಇಟ್ಟು ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸಮುದಾಯದ ಜನರ ಆಸೆಯನ್ನು ರಾಜ್ಯ ಸಂಘದಿಂದ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮತ್ತೊಬ್ಬ ನೂತನ ನಿರ್ದೇಶಕ ಲೋಕೇಶ್ ಡಿ. ನಾಗರಾಜಯ್ಯ ಮಾತನಾಡಿ, ಜನಾಂಗದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ನನ್ನ ಕೈಲಾದಷ್ಟು ಮಟ್ಟಿಗೆ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತೇನೆಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಹಾಪ್‍ಕಾಮ್ಸ್ ಅಧ್ಯಕ್ಷ ವಿಜಿಗೌಡ, ಕೆಂಪರಾಜು, ಕೃಷ್ಣಮೂರ್ತಿ, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಸಹಕಾರ ಸಂಘಗಳ ಉಪನಿಬಂಧಕರಾದ ಆರ್.ಜೆ.ಕಾಂತರಾಜು ಮತ್ತು ಸಿಬ್ಬಂದಿ ಚುನಾವಣೆ ಮತ ಎಣಿಕೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು.

ಅಭ್ಯರ್ಥಿಗಳು ಪಡೆದ ಮತ:

ಆರ್.ಹನುಮಂತರಾಯಪ್ಪ      14,901
ಲೋಕೇಶ್ ಡಿ.ನಾಗರಾಜಯ್ಯ  11,027
ಬೆಳ್ಳಿ ಲೋಕೇಶ್               8,022
ಸುಜಾತ ನಂಜೇಗೌಡ         6261
ಡಾ.ಸಿ.ಕೆ.ಎಂ.ಗೌಡ         4041
ಕಪನಿಗೌಡ                  211
ಶಿವರಾಮಯ್ಯ              137

ಗೆಲ್ಲುವ ವಿಶ್ವಾಸವಿತ್ತು, ಮತದಾರರು ಆಶೀರ್ವದಿಸಿದ್ದಾರೆ:

ನನಗೆ ಗೆಲುವಿನ ನಿರೀಕ್ಷೆ ಇತ್ತು. ನಾನು ಪ್ರಚಾರಕ್ಕೆ ಹೋದೆಡೆಯಲ್ಲ ಮತದಾರರು ಸಂಪೂರ್ಣ ಭರವಸೆ ನೀಡಿದ್ದರು. ಹಾಗಾಗಿ ಜಿಲ್ಲೆಯ ಮತದಾರರಿಗೆ ಸದಾ ಚಿರಋಣಿಯಾಗಿದ್ದೇನೆ. ಈ ಚುನಾವಣೆ ರಾಜ್ಯ ಒಕ್ಕಲಿಕರ ಸಂಘದ ಅಭಿವೃದ್ಧಿಗೆ ಪ್ರಮುಖವಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಜನಾಂಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.

-ಆರ್.ಹನುಮಂತರಾಯಪ್ಪ ನೂತನ ನಿರ್ದೇಶಕ

ಜಿಲ್ಲೆಗೆ ದೊರೆಯುವ ಎಲ್ಲ ಸೌಕರ್ಯಗಳನ್ನು ಸಂಘದ ವತಿಯಿಂದ ಒದಗಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನಮ್ಮ ತಂದೆಯವರ ಕೆಲಸ ಕಾರ್ಯಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿವೆ. ಜನರ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ.

-ಲೋಕೇಶ್ ಡಿ.ನಾಗರಾಜಯ್ಯ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link