ತುಂಬಿ ಹರಿದ ಜಯಮಂಗಲಿ-ಉತ್ತರ ಪಿನಾಕಿನಿ ನದಿಗಳು

ಮಧುಗಿರಿ:

    ಬರೋಬ್ಬರಿ 20 ವರ್ಷಗಳ ನಂತರ ಬರಿದಾಗಿದ್ದ ಕೆರೆ-ಕಟ್ಟೆಗಳು-ತೊರೆಗಳು ಇತ್ತೀಚೆಗೆ ಸುರಿದ ಮಳೆಯಿಂದಾಗಿ ತುಂಬಿವೆ. ಜಯಮಂಗಲಿ, ಉತ್ತರ ಪಿನಾಕಿನಿ ನದಿಗಳು ತುಂಬಿ ಹರಿದು ರೈತರ ಮೊಗದಲ್ಲಿ ಮಂದಹಾಸ ಬೀರತೊಡಗಿದ್ದು, ಕೊಳವೆ ಬಾವಿಗಳಲ್ಲಿ ಅಂರ್ತಜಲ ಮಟ್ಟ ಹೆಚ್ಚಾಗುವ ಶುಭ ಸೂಚನೆ ದೊರೆತಿದೆ.

ಸೋಮವಾರ ರಾತ್ರಿ ಜೋರು ಮಳೆಯಾಗಿದ್ದು, ಕೆರೆ, ಕಟ್ಟೆಗಳು ಭರ್ತಿಯಾಗಿದ್ದು, ಸಿದ್ದಾಪುರ, ಚೋಳೇನಹಳ್ಳಿ, ಹೊಸಕೆರೆ, ವಿರುಪಗೊಂಡನಹಳ್ಳಿ, ಹನುಮಂತಪುರ, ವೀರಣ್ಣನಹಳ್ಳಿ, ಕೆ.ಬಸವನಹಳ್ಳಿ, ಸಿದ್ದರಕಟ್ಟೆ, ಚಿನಕವಜ್ರ ಗ್ರಾಮಗಳ ಕೆರೆಗಳು ಕೋಡಿ ಹರಿಯುತ್ತಿವೆ. ನದಿಗಳು ಹರಿಯುವುದನ್ನು ನೋಡಲು ಜನರು ಸಾಗರೋಪಾದಿಯಲ್ಲಿ ಕೆರೆಗಳ ಬ್ರಿಡ್ಜ್‍ಗಳ ಸಮೀಪ ಜಮಾಯಿಸುತ್ತಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಒಣಗಿ ನಿಂತಿದ್ದ, ನೀರನ್ನೇ ಕಾಣದ ಕೆರೆಗಳಿಗೂ ಜೀವ ಕಳೆ ಬಂದಿದೆ. ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಕೋಡಿ ಹರಿಯುತ್ತಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರು ಅಂತ್ಯದ ನಂತರ ಅಕ್ಟೋಬರ್ ತಿಂಗಳ ಕೊನೆವರೆಗೂ ಮಳೆಯಾಗುತ್ತದೆ. ಹೆಚ್ಚೆಂದರೆ ನವೆಂಬರ್ ತಿಂಗಳ ಆರಂಭದಲ್ಲಿ ಒಂದೆರಡು ಬಾರಿ ಸುರಿಯುತ್ತದೆ. ಆದರೆ ಈ ಸಲ ನವೆಂಬರ್ ಮಧ್ಯ ಭಾಗದಲ್ಲೂ ಮಳೆಯಾಗುತ್ತಿದೆ.

ರಾತ್ರಿ ಸುರಿದ ಮಳೆಯಿಂದಾಗಿ ಮಧುಗಿರಿ, ಗೌರಿಬಿದನೂರು, ಹಿಂದೂಪುರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಅಗಸರ ಹೊಳೆಯ ಸೇತುವೆಯು ಮಳೆಯ ನೀರಿನ ರಭಸಕ್ಕೆ ಶಿಥಿಲವಾಗಿದೆ. ಪಟ್ಟಣದ ಬಸವಣ್ಣನ ಬೆಟ್ಟದ ಬುಡದಲ್ಲಿ ಬೃಹತ್ ಬಂಡೆಯೊಂದು ಜಾರಿದ್ದು, ಪಟ್ಟಣದ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯು ಸಂಪರ್ಕ ಕಳೆದುಕೊಂಡಿದೆ. ಬೃಹತ್ ಬಂಡೆ ಜಾರಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.


ಕಸಬಾ ಹೋಬಳಿಯ ಗೋಪಗೊಂಡನಹಳ್ಳಿಯ ಅಂಗನವಾಡಿಗೆ ಮಳೆಯ ನೀರು ನುಗ್ಗಿದ್ದು, ನಂತರ ಸಹಾಯಕಿಯರು ಮಳೆಯ ನೀರನ್ನು ಹೊರ ಹಾಕಿದರು. ಕೆಲ ಗ್ರಾಮಗಳಲ್ಲಿ ಓಡಾಡುವ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಪಟ್ಟಣದ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬೃಹತ್ ಬಂಡೆ ಆಡ್ಡವಾಗಿ ಸ್ಥಾನ ಪಲ್ಲಟವಾಗಿದ್ದರಿಂದ ಅಧಿಕಾರಿಗಳು ಬೇರೆ ಮಾರ್ಗದಲ್ಲಿ ವಾಹನಗಳ ವ್ಯವಸ್ಥೆ ಕಲ್ಪಿಸಿದ್ದು ಕಂಡು ಬಂತು.

ಕೆಎನ್‍ಆರ್ ಸ್ಮರಿಸಿದ ಜನರು:
ಎರಡು ಕಡೆ ಮುಖ್ಯ ರಸ್ತೆಗಳು ಮಳೆಯಿಂದ ಹಾನಿಯಾದ ಹಿನ್ನೆಲೆಯಲ್ಲಿ ಬೈಪಾಸ್ ರಸ್ತೆ ಮೂಲಕ ವಾಹನ ಸಂಚಾರ ನಡೆಸಿದವು ಹಾಗೂ ಈ ಬೈಪಾಸ್ ಇಲ್ಲದೆ ಹೋಗಿದ್ದರೆ ಪಟ್ಟಣಕ್ಕೆ ಬರಲು ಹರಸಾಹಸ ಮಾಡಬೇಕಾಗಿತ್ತು . ಮೋರಿ ಕಾಮಗಾರಿ ಮಾಡದೆ ಹೋಗಿದ್ದರೆ ನೀರೆಲ್ಲಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹರಿದು ಜೀವನ ಅಸ್ತವ್ಯಸ್ತ ಆಗುತ್ತಿತ್ತು. ಪೋಸ್ಟ್ ಆಫೀಸ್ ಬಳಿಯ ರಸ್ತೆಯ ಸಮೀಪವಿದ್ದ ಬೃಹತ್ ಬಂಡೆಯ ಗಾತ್ರವನ್ನು ಕಡಿಮೆ ಮಾಡಿದ್ದು ಕೆಎನ್‍ಆರ್ ಅವರ ಅವಧಿಯಲ್ಲಿ ಎಂದು ಅವರನ್ನು ಜನರು ನೆನೆದರು.

ಚೋಳೆನಹಳ್ಳಿಯ ಕೆರೆ ತುಂಬಿದ್ದು, ಅಗಸರಹೊಳೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಗಿಡ ಗೆಂಟೆಗಳು ಬೆಳೆದು ಸಾಕಷ್ಟು ಹಾನಿಯಾಗಲಿದೆ ಎಂದು ತಾಲ್ಲೂಕಿನ ಪತ್ರಕರ್ತರು ಕೆಲ ದಿನಗಳ ಹಿಂದೆಯೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಎಂ.ವಿ.ವೀರಭದ್ರಯ್ಯ ನವರ ಗಮನಕ್ಕೆ ತಂದಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೇತುವೆ ಪಕ್ಕದಲ್ಲಿರುವ ಮಣ್ಣು ಕುಸಿದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap