ದೇಶದಲ್ಲಿ ಪಾದಯಾತ್ರೆ ಆರಂಭಿಸಿದ್ದೇ ಕಾಂಗ್ರೆಸ್ : ಡಿ ಕೆ ಶಿವಕುಮಾರ್

ಬೆಂಗಳೂರು:

    ದೇಶದಲ್ಲಿ ಪಾದಯಾತ್ರೆ ಹೋರಾಟ ಪರಿಚಯಿಸಿದ್ದೇ ಕಾಂಗ್ರೆಸ್ ಪಕ್ಷ. ಈಗ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು, ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿದು ಪ್ರಚಾರ ಪಡೆಯಲು ಬಿಜೆಪಿಯವರು ಷಡ್ಯಂತ್ರ ರೂಪಿಸಿ ಪಾದಯಾತ್ರೆ ಮಾಡುತ್ತಿದ್ದಾರೆ, ಪಾದಯಾತ್ರೆ ಮೂಲಕ ಅವರು ತೋಡಿಕೊಂಡ ಭಾವಿಗೆ ಅವರೇ ಬೀಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

  ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮುಡಾ ಅಕ್ರಮದ ವಿಚಾರವಾಗಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು “ಬಿಜೆಪಿಯವರು ಹಗರಣಗಳ ಸರದಾರರು. ತಾವೇ ತೋಡಿಕೊಂಡಿರುವ ಬಾವಿಗೆ ಬೀಳಲು ಹೋಗುತ್ತಿದ್ದಾರೆ. ಇದು ಆತ್ಮಹತ್ಯೆ ಪ್ರಯತ್ನವಾಗಿದೆ. ದೇಶದಲ್ಲೇ ಕಾಂಗ್ರೆಸ್ ಆಡಳಿತದಲ್ಲಿರುವ ಅತಿ ದೊಡ್ಡ ರಾಜ್ಯ ಕರ್ನಾಟಕ. ಹೀಗಾಗಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಅವರು ಏನಾದರೂ ಮಾಡಲಿ. ನಾವು ನಮ್ಮದೇ ಆದ ರೀತಿ ಉತ್ತರ ನೀಡುತ್ತೇವೆ ಎಂದರು.

   ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ತಿಳಿದ ತಕ್ಷಣ, ನಮ್ಮ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದು, ಹಲವರನ್ನು ಬಂಧಿಸಿ, ಅಕ್ರಮವಾಗಿ ಸಾಗಾಟ ಮಾಡಿದ್ದ ಹಣವನ್ನು ವಾಪಸ್ ಪಡೆದಿದ್ದೇವೆ. ಪ್ರತಿಪಕ್ಷಗಳು ಪ್ರಚಾರ ಪಡೆಯಲು ಬೇರೆ ತನಿಖಾ ಸಂಸ್ಥೆಗಳನ್ನು ಕರೆತಂದು ನಮ್ಮವರಿಗೆ ಕಿರುಕುಳ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕಾನೂನು ಪ್ರಕಾರ ಅವರ ಪ್ರಯತ್ನ ಅವರು ಮಾಡಲಿ ಎಂದು ತಿಳಿಸಿದರು.

   ಈ ವಿಚಾರವಾಗಿ ಚರ್ಚೆ ಮಾಡಲು ಸದನದಲ್ಲಿ ಅವಕಾಶ ನೀಡಿದೆವು. ಆದರೆ ಅವರು ಮುಖ್ಯಮಂತ್ರಿಗಳಿಗೆ ಉತ್ತರ ನೀಡಲು ಅವಕಾಶವನ್ನೇ ನೀಡಲಿಲ್ಲ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಸಿ.ಟಿ ರವಿ ಸೇರಿದಂತೆ ಅವರ ಪಕ್ಷದ ನಾಯಕರು ಮಾತನಾಡುವಾಗ ತಾಳ್ಮೆಯಿಂದ ಕೇಳಿಸಿಕೊಂಡಿದ್ದೇವೆ. ನಮ್ಮ ಮುಖ್ಯಮಂತ್ರಿಗಳು ಬಿಜೆಪಿಯ ಆಡಳಿತ ಅವಧಿಯಲ್ಲಿ ಇದೇ ಮಾದರಿಯಲ್ಲಿ ನಡೆದಿರುವ ಅಕ್ರಮಗಳನ್ನು ಬಯಲು ಮಾಡಿದರು.

   ಅವರ ಅಕ್ರಮಗಳ ಬಗ್ಗೆ ಸಿಎಜಿ ವರದಿಗಳಿವೆ. ಇವುಗಳ ಬಗ್ಗೆ ಚರ್ಚೆ ಮಾಡಲು ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ” ಎಂದು ತಿಳಿಸಿದರು. ಅದೇ ರೀತಿ ಮುಡಾ ವಿಚಾರದಲ್ಲೂ ಅವರು ಪ್ರಚಾರ ಪಡೆಯಲು ಮುಂದಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎಂಬ ಕಾರಣಕ್ಕೆ ಇಬ್ಬರೂ ಒಂದಾಗಿ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ. ಅವರ ಕಾಲದಲ್ಲಿ ಯಾರು ಅಕ್ರಮವಾಗಿ ಎಷ್ಟು ನಿವೇಶನಗಳನ್ನು ಪಡೆದಿದ್ದಾರೆ ಎಂಬುದನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 

   ಮುಖ್ಯಮಂತ್ರಿಗಳ ಕುಟುಂಬದ ಜಮೀನನ್ನು ನೋಟಿಫಿಕೇಶನ್ ಮಾಡದೇ ಮೂಡಾದವರು ಕಬಳಿಸಿದ್ದರು. ಅದಕ್ಕೆ ಪರಿಹಾರವಾಗಿ ಈ ನಿವೇಶನಗಳನ್ನು ನೀಡಲಾಗಿದೆ. ನಿಯಮಾವಳಿ ಪ್ರಕಾರ ನೋಟಿಫಿಕೇಶನ್ ಮಾಡದೇ ಭೂಮಿಯನ್ನು ಬಳಸಿಕೊಂಡರೆ ಪರಿಹಾರ ನೀಡಲು ಅವಕಾಶವಿದೆ. ಅದೇ ರೀತಿ ಇಲ್ಲೂ ಆಗಿದೆ. ಕೆಲವು ಕಡೆ 50:50 ಅನುಪಾತದಲ್ಲಿ ನೀಡಿದರೆ, ಮತ್ತೆ ಕೆಲವು ಕಡೆ ಶೇ.100 ರಷ್ಟು ಮತ್ತೆ ಕೆಲವು ಕಡೆ ಶೇ.30 ರಷ್ಟು ನೀಡುತ್ತಾರೆ.

   ಮುಖ್ಯಮಂತ್ರಿಗಳ ಕುಟುಂಬದವರು ನಮಗೆ ಇಂತಹದೇ ಜಾಗದಲ್ಲಿ ನಿವೇಶನ ನೀಡಿ ಎಂದು ಕೇಳಿಲ್ಲ. ಮುಡಾ ಅಧಿಕಾರಿಗಳು ಕೊಟ್ಟ ನಿವೇಶನವನ್ನು ಪಡೆದಿದ್ದಾರೆ ಎಂದು ವಿವರಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಈ ನಿವೇಶನ ಹಂಚಿಕೆ ಮಾಡಲಾಗಿದೆ. ಬೇರೆಯವರ ನಿವೇಶನ ಹಂಚಿಕೆ ವಿಚಾರವಾಗಿ ಸಂಬಂಧಪಟ್ಟ ಮಂತ್ರಿಗಳು ಮಾತನಾಡುತ್ತಾರೆ. ನಾನು ಕೂಡ ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಮುಖ್ಯಮಂತ್ರಿಗಳ ಕುಟುಂಬ ಕೇವಲ ಪರಿಹಾರ ಪಡೆದಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಈ ಪ್ರಕ್ರಿಯೆ ನಡೆದಿವೆ. ಈಗ ಮುಖ್ಯಮಂತ್ರಿಗಳ ಘನತೆಗೆ ಮಸಿ ಬಳಿಯಲು ವಿರೋಧ ಪಕ್ಷದವರು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

   “ದೇಶದಲ್ಲಿ ಪಾದಯಾತ್ರೆ ಮಾಡುವುದನ್ನು ಆರಂಭಿಸಿದ್ದೇ ಕಾಂಗ್ರೆಸ್. ಮಹಾತ್ಮಾ ಗಾಂಧಿಜೀ ಅವರ ನಾಯಕತ್ವದಲ್ಲಿ ಪಾದಯಾತ್ರೆ ಆರಂಭವಾಗಿತ್ತು. ಸ್ವಾತಂತ್ರ್ಯ ಹೋರಾಟದಿಂದ ಭಾರತ ಜೋಡೋ, ಬಳ್ಳಾರಿ, ಮೇಕೆದಾಟು ಪಾದಯಾತ್ರೆ ಮಾಡಿದ್ದೇವೆ. ಪಾದಯಾತ್ರೆ ನಮ್ಮ ಸ್ವತ್ತು. ಬಿಜೆಪಿ ಹಗರಣಗಳ ಸರದಾರರು. ಅವರ ಅಕ್ರಮಗಳನ್ನು ಬಿಚ್ಚಿಡುತ್ತೇವೆ. ಯಾರು ಎಷ್ಟು ನಿವೇಶನಕ್ಕೆ ಅರ್ಜಿ ಹಾಕಿದ್ದರು. ಎಷ್ಟು ನಿವೇಶನ ಪಡೆದಿದ್ದಾರೆ ಎಂಬುದನ್ನು ಬಹಿರಂಗ ಮಾಡುತ್ತೇವೆ” ಎಂದು ತಿಳಿಸಿದರು.

   ವಾಲ್ಮೀಕಿ ನಿಗಮದ ಹಗರಣದ ತನಿಖೆಯಲ್ಲಿ ಎಸ್ಐಟಿ ಮಧ್ಯಂತರ ವರದಿಯನ್ನು ನೀಡಲಿದೆಯೇ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ತಿಳಿಸಿದರು. ಬಿಜೆಪಿಯವರು ಸಂಸತ್ತಿನಲ್ಲೂ ಈ ವಿಚಾರವಾಗಿ ಪ್ರತಿಭಟನೆ ಮಾಡುವುದಾಗಿ ಹೇಳಿರುವ ಬಗ್ಗೆ ಕೇಳಿದಾಗ, “ಅವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟ ಬಲಿಷ್ಠವಾಗುತ್ತಿದೆ. ಬಿಜೆಪಿಯವರು ಏನಾದರೂ ಮಾಡಿಕೊಳ್ಳಲಿ” ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link