ಅಚ್ಚರಿಯ ಹೇಳಿಕೆ ನೀಡಿದ ಬಹುಭಾಷಾ ನಟಿ ಪದ್ಮಪ್ರಿಯ….!

ತಮಿಳುನಾಡು:

    ಹೇಮಾ ವರದಿ ಬಹಿರಂಗದ ಬಳಿಕ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಯರು ತಮ್ಮ ಮೇಲಾಗಿದ್ದ, ಆಗುತ್ತಿರುವ ದೈಹಿಕ, ಮಾನಸಿಕ ದೌರ್ಜನ್ಯದ ಕುರಿತು ಮಾತನಾಡುತ್ತಿದ್ದಾರೆ. ತಮ್ಮ ಚಿತ್ರರಂಗಗಳಲ್ಲಿಯೂ ಹೇಮಾ ಕಮಿಟಿ ರೀತಿಯ ಕಮಿಟಿ ರಚನೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿಯೂ ಈ ಬೇಡಿಕೆ ನಿರ್ಮಾಣವಾಗಿದೆ. ಇದರ ನಡುವೆ ಖ್ಯಾತ ನಟಿ ಪದ್ಮಪ್ರಿಯಾ ತಮಿಳು ಚಿತ್ರರಂಗದಲ್ಲಿ ತಮಗೆ ಆಗಿದ್ದ ಅವಮಾನದ ಬಗ್ಗೆ ಮಾತನಾಡಿದ್ದಾರೆ.

   ಏಳು ಭಾಷೆಗಳಲ್ಲಿ ನಟಿಸಿರುವ ಮಲಯಾಳಂ ನಟಿ ಪದ್ಮಪ್ರಿಯಾ, 2004 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವರು. ಹಲವು ಭಾಷೆಗಳಲ್ಲಿ ಖ್ಯಾತ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಅತ್ಯುತ್ತಮ ನಟನೆಗೆ ಹಲವು ಪ್ರಶಸ್ತಿಗಳನ್ನು ಸಹ ಅವರು ತಮ್ಮದಾಗಿಸಿಕೊಂಡಿದ್ದಾರೆ. ಕಾಲೇಜು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪದ್ಮಪ್ರಿಯಾ, ‘2007 ರಲ್ಲಿ ಬಿಡುಗಡೆ ಆದ ತಮಿಳಿನ ‘ಮೃಗಂ’ ಸಿನಿಮಾದಲ್ಲಿ ನಟಿಸುವಾಗ, ಚಿತ್ರೀಕರಣದ ಕೊನೆಯ ದಿನ ಎಲ್ಲರ ಎದುರು ನಿರ್ದೇಶಕ ಸ್ವಾಮಿ ನನ್ನ ಕಪಾಳಕ್ಕೆ ಹೊಡೆದಿದ್ದರು’ ಎಂದಿದ್ದಾರೆ. 

   ‘ಆ ಘಟನೆ ನನಗೆ ಆಘಾತ ಉಂಟು ಮಾಡಿತ್ತು. ಆದರೆ ಮಾಧ್ಯಮಗಳು ಘಟನೆ ಬಗ್ಗೆ ಉಲ್ಟಾ ವರದಿ ಮಾಡಿದವು. ನಾನೇ ನಿರ್ದೇಶಕನ ಕಪಾಳಕ್ಕೆ ಹೊಡೆದಿದ್ದೇನೆ ಎಂದು ವರದಿ ಬರೆದವು, ಇದು ನನಗೆ ಆಘಾತ ತಂದಿತು. ಅದಾದ ಬಳಿಕ ಘಟನೆ ಬಗ್ಗೆ ನಾನು ತಮಿಳು ಸಿನಿಮಾ ಸಂಘಗಳಿಗೆ ದೂರು ನೀಡಿದೆ. ಆದರೆ ಅದರಿಂದ ಯಾವುದೇ ಉಪಯೋಗ ಆಗಲಿಲ್ಲ. ಆ ನಂತರ ನನ್ನನ್ನೇ ಕೆಲವು ಸಿನಿಮಾಗಳಿಂದ ಕೈ ಬಿಡಲಾಯ್ತು. ಅದಾಗಲೇ ಒಪ್ಪಿಕೊಂಡಿದ್ದ ಸಿನಿಮಾಗಳಿಂದಲೂ ನನ್ನನ್ನು ತೆಗೆಯಲಾಯ್ತು’ ಎಂದಿದ್ದಾರೆ.

    ‘ಮೃಗಂ’ ಸಿನಿಮಾದ ನಟನೆಗೆ ನನಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ದೊರಕಿತು. ನನ್ನ ನಟನೆಯನ್ನು ಜನ ಮೆಚ್ಚಿಕೊಂಡರು. ನನ್ನ ವಿರುದ್ಧ ಏನೇ ಪಿತೂರಿ ಮಾಡಿದರೂ ಸಹ ನಾನು ಮಾಡಿದ ಕೆಲಸದಿಂದ ನನಗೆ ಗೌರವ ಪ್ರಾಪ್ತಿಯಾಯ್ತು’ ಎಂದಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿ ಇರುವ ಲಿಂಗ ಭೇದದ ಬಗ್ಗೆಯೂ ನಟಿ ಪದ್ಮಪ್ರಿಯಾ ಮಾತನಾಡಿದ್ದು, ಲಿಂಗ ಭೇದದ ಬಗ್ಗೆ ನಾನು ವರ್ಷಗಳಿಂದಲೂ ಮಾತನಾಡುತ್ತಲೇ ಇದ್ದೇನೆ’ ಎಂದಿದ್ದಾರೆ.