ನವದೆಹಲಿ:
ಬುಧವಾರ ಸಂಜೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿಯಲ್ಲಿ ನಡೆದ ಹಿಂಸಾಚಾರದಲ್ಲಿ 12 ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡ ನಂತರ, ಎರಡೂ ದೇಶಗಳು 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡವೆ. ಸಂಕೀರ್ಣವಾದರೂ ಪರಿಹರಿಸಬಹುದಾದ ಈ ಸಮಸ್ಯೆಗೆ ಸಕಾರಾತ್ಮಕ ಪರಿಹಾರವನ್ನು ಕಂಡುಕೊಳ್ಳಲು ಎರಡೂ ಕಡೆಯವರು ಸಂವಾದದ ಮೂಲಕ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವೆ ಎಂದು ಪಾಕಿಸ್ತಾನದ ವಕ್ತಾರರು ತಿಳಿಸಿದ್ದಾರೆ. ಅಫ್ಘಾನಿಸ್ತಾನ ಕದನ ವಿರಾಮ ಕೇಳಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಕದನ ವಿರಾಮದ ಬಗ್ಗೆಯಾಗಲಿ ಅಥವಾ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಯಾರು ಕೇಳಿದರು ಎಂಬ ಪಾಕ್ ಹೇಳಿಕೆಯ ಬಗ್ಗೆಯಾಗಲಿ ಅಫ್ಘಾನಿಸ್ತಾನ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾತ್ರಿಯಿಡೀ ನಡೆದ ಸೇನಾ ಕಾರ್ಯಾಚರಣೆಗಳಲ್ಲಿ ಹಲವು ಅಫ್ಘಾನಿಸ್ತಾನದ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳನ್ನು ಕೊಂದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಅಪ್ರಚೋದಿತ’ ದಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಟ್ಯಾಂಕ್ಗಳು ಮತ್ತು ಮಿಲಿಟರಿ ಪೋಸ್ಟ್ಗಳನ್ನು ನಾಶಪಡಿಸಲಾಗಿದೆ ಎಂದು ಪಾಕ್ ಹೇಳಿದೆ.
ತನ್ನ ಭೂಪ್ರದೇಶದ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಬಂದೂಕುಧಾರಿಗಳಿಗೆ ಅಫ್ಘಾನಿಸ್ತಾನ ಬೆಂಬಲ ನೀಡುತ್ತಿದೆ ಎಂದು ಪಾಕ್ ಆರೋಪಿಸಿದೆ. 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಈ ದಾಳಿಗಳು ಹೆಚ್ಚಾಗಿದೆ ಎಂದು ಪಾಕ್ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ, ತಾಲಿಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್, ಪಾಕ್ ಸೇನೆಯ ಗಡಿ ಹೊರಠಾಣೆ ನಾಶಪಡಿಸಲಾಯಿತು ಮತ್ತು ಪ್ರತೀಕಾರವಾಗಿ ಶತ್ರು ಟ್ಯಾಂಕ್ ಅನ್ನು ವಶಪಡಿಸಿಕೊಳ್ಳಲಾಯಿತು ಎಂದು ಹೇಳಿದರು.
2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಸಂಬಂಧಗಳು ಹದಗೆಟ್ಟಿವೆ. ಗಡಿಯಾಚೆಯ ದಾಳಿಗಳು ಮತ್ತು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಆರೋಪಗಳಿಂದಾಗಿ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದನೆಗೆ ತಾಲಿಬಾನ್ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಇಸ್ಲಾಮಾಬಾದ್ ಆರೋಪಿಸುತ್ತಿದೆ. ಇದೇ ವೇಳೆ ಲಕ್ಷಾಂತರ ಅಫ್ಘಾನ್ ನಿರಾಶ್ರಿತರನ್ನು ಗಡಿಪಾರು ಮಾಡುವ ಪಾಕಿಸ್ತಾನದ ನಿರ್ಧಾರ ಕಾಬೂಲ್ನೊಂದಿಗೆ ಸಂಬಂಧ ಹದಗೆಡಿಸಿದೆ.
