ಇಸ್ಲಾಮಾಬಾದ್
ಪಾಕಿಸ್ತಾನದ ಅಂತರ-ಸೇವೆಗಳ ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಪತ್ರಿಕಾಗೋಷ್ಠಿಯ ಸಮಯದಲ್ಲಿ ಪತ್ರಕರ್ತೆಯೊಬ್ಬರ ಕಡೆಗೆ ನೋಡಿ ಕಣ್ಣು ಮಿಟುಕಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಪತ್ರಕರ್ತೆ ಅಬ್ಸಾ ಕೋಮಲ್, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಚೌಧರಿ ಮಾಡಿರುವ ಆರೋಪಗಳನ್ನು ಪ್ರಶ್ನಿಸಿದ್ದಾರೆ. ಚೌಧರಿ ಮಾತನಾಡಿ ಇಮ್ರಾನ್ ಖಾನ್, ರಾಷ್ಟ್ರೀಯ ಭದ್ರತೆಗೆ ಬೆದರಿಕೆ, ರಾಷ್ಟ್ರ ವಿರೋಧಿ ಮತ್ತು ದೆಹಲಿ ಸೂಚನೆಗಳ ಮೇರೆಗೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ ಅವರು ಮಾನಸಿಕ ರೋಗಿ ಕೂಡ ಎಂದು ಚೌಧರಿ ವ್ಯಂಗ್ಯವಾಡಿದ್ದರು. ನಂತರ ಮುಗುಳ್ನಕ್ಕು, ಪತ್ರಕರ್ತೆ ಅಬ್ಸಾ ಕೋಮಲ್ ಕಡೆಗೆ ಕಣ್ಣು ಮಿಟುಕಿಸಿದರು.
ಈ ಸನ್ನೆಯ ವಿಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಚೌಧರಿ ವೃತ್ತಿಪರ ಸೈನಿಕನಲ್ಲ ಎಂದು ಒಬ್ಬ ಬಳಕೆದಾರರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಅವರ ಸೈನ್ಯ ಎಷ್ಟು ವೃತ್ತಿಪರವಲ್ಲದ್ದು ಎಂಬುದನ್ನು ತೋರಿಸುತ್ತದೆ. ಸಮವಸ್ತ್ರದಲ್ಲಿರುವ ಯಾರಾದರೂ ಸಾರ್ವಜನಿಕವಾಗಿ ಈ ರೀತಿ ಕಣ್ಣು ಮಿಟುಕಿಸುತ್ತಾರೆಯೇ? ಎಂದು ಮತ್ತೊಬ್ಬರು ಬರೆದಿದ್ದಾರೆ.
ಇತ್ತೀಚಿಗೆ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಚೌಧರಿ, ಭಾರತ ವಿರೋಧಿ ಹೇಳಿಕೆ ನೀಡುವ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಮೇಯಲ್ಲಿ ಪಾಕ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ್ ವೇಳೆಯೂ ಅವರು ಕುಖ್ಯಾತಿ ಗಳಿಸಿದ್ದರು. ಚೌಧರಿ ಘೋಷಿತ ಭಯೋತ್ಪಾದಕ ಮತ್ತು ಒಸಾಮಾ ಬಿನ್ ಲಾಡೆನ್‌ನ ಸಹಾಯಕ ಸುಲ್ತಾನ್ ಬಶೀರುದ್ದೀನ್ ಮಹಮೂದ್‌ನ ಮಗ.
ಲೆಫ್ಟಿನೆಂಟ್ ಜನರಲ್ ಚೌಧರಿ, ಇಮ್ರಾನ್ ಖಾನ್ ವಿರುದ್ಧ ವಾಕ್ಪ್ರಹಾರ ನಡೆಸಿದ ಬಳಿಕ ಭಾರಿ ಕೋಲಾಹಲವುಂಟಾಯಿತು. ಕಳೆದ ವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನಾರ್ಸಿಸಿಟ್ಟ್ ಮತ್ತು ಮಾನಸಿಕ ಅಸ್ವಸ್ಥ ವ್ಯಕ್ತಿ ಎಂದು ಹೇಳಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟುಮಾಡುವಂತಹ ನ್ಯಾರೇಟಿವ್ ಅನ್ನು ರೂಪಿಸಿರುವುದಾಗಿ ಆರೋಪಿಸಿದ್ದರು.
ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಮಾನಸಿಕ ಅಸ್ಥಿರ ವ್ಯಕ್ತಿ ಎಂದು ಖಾನ್ ಕರೆದಿದ್ದಕ್ಕೆ ಮತ್ತು ಪಾಕಿಸ್ತಾನದಲ್ಲಿ ಸಂವಿಧಾನ ಮತ್ತು ಕಾನೂನು ಬಲದ ಸಂಪೂರ್ಣ ಕುಸಿತಕ್ಕೆ ಅಸಿಮ್ ಮುನೀರ್ ಕಾರಣವೆಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಟೀಕಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಚೌಧರಿ ಈ ರೀತಿ ಪ್ರತಿಕ್ರಿಯೆ ನೀಡಿದ್ದರು.
ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗದ ಮುಖ್ಯಸ್ಥರು, ಭಾರತೀಯ ಮಾಧ್ಯಮಗಳು, ಭಾರತದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗಕ್ಕೆ ಸಂಬಂಧಿಸಿದ ಖಾತೆಗಳು ಮತ್ತು ಅಫ್ಘಾನ್ ಸಾಮಾಜಿಕ ಜಾಲತಾಣಗಳು, ಖಾನ್ ಅವರ ಸೇನೆ–ವಿರೋಧಿ ಹೇಳಿಕೆಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿದ್ದವೆಂದು ಕೂಡ ಆರೋಪಿಸಿದರು.








