ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಕಠಿಣ ನಿಲುವು ತಳೆದ ಭಾರತ; ಗಡಿಯಲ್ಲಿ ದೀಪಾವಳಿ ಸಿಹಿ ವಿತರಣೆಗೆ ಬ್ರೇಕ್‌

ಜೈಪುರ:

    ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ, ದೀಪಾವಳಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ಭಾರತೀಯ ಸೈನಿಕರು ಮತ್ತು ಪಾಕಿಸ್ತಾನದ ಯೋಧರು ಸಿಹಿತಿಂಡಿ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಆದರೆ ಈ ಬಾರಿ 2 ದೇಶಗಳ ಮಧ್ಯೆ ಉದ್ವಿಗ್ನ ವಾತಾವರಣ ಇನ್ನೂ ಮುಂದಿವರಿದಿರುವುದರಿಂದ ಸಿಹಿತಿಂಡಿ ವಿತರಣೆಗೆ ಕೇಂದ್ರ ಸರ್ಕಾರ ಬ್ರೇಕ್‌ ಹಾಕಿದೆ. ಸ್ವಾತಂತ್ರ್ಯ ದಿನಾಚರಣೆಯ ನಂತರ ಭಾರತ ಮತ್ತೊಮ್ಮೆ ದೀಪಾವಳಿಯಂದು ಪಾಕಿಸ್ತಾನಿ ರೇಂಜರ್‌ಗಳಿಗೆ ಸಿಹಿ ನೀಡುವುದನ್ನು ನಿಲ್ಲಿಸಿದೆ. ಈ ವರ್ಷ ಭಾರತ-ಪಾಕ್ ಗಡಿಯಲ್ಲಿ  ಸಾಂಪ್ರದಾಯಿಕ ಸಿಹಿತಿಂಡಿಗಳ ವಿನಿಮಯ ನಡೆಸದಂತೆ ಕೇಂದ್ರ ಗೃಹ ಸಚಿವಾಲಯ ಗಡಿ ಭದ್ರತಾ ಪಡೆಗೆ ನಿರ್ದೇಶನ ನೀಡಿದೆ.

   ಅದರಂತೆ ಬಿಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುವ ರಾಜಸ್ಥಾನದ ಶ್ರೀಗಂಗಾನಗರ, ಬಿಕಾನೇರ್, ಜೈಸಲ್ಮೇರ್ ಮತ್ತು ಬಾರ್ಮರ್‌ನಾದ್ಯಂತದ ಯಾವುದೇ ಸಿಹಿತಿಂಡಿ ವಿನಿಮಯ ನಡೆಯಲಿಲ್ಲ. 

   ದಶಕಗಳಿಂದ ಭಾರತ ಮತ್ತು ಪಾಕಿಸ್ತಾನಿ ಸೈನಿಕರು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಹೋಳಿ, ದೀಪಾವಳಿ ಮತ್ತು ಈದ್‌ನಂತಹ ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಸಿಹಿತಿಂಡಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು 26 ಪ್ರವಾಸಿಗರನ್ನು ಕೊಲೆ ಮಾಡಿದ ನಂತರ ಈ ಸಂಪ್ರದಾಯವನ್ನು ನಿಲ್ಲಿಸಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶತ್ರು ರಾಷ್ಟ್ರದೊಂದಿಗೆ ತಳೆದ ಕಠಿಣ ನಿಲುವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

   ಮೊದಲು ಆಗಸ್ಟ್ 15ರ ಸಿಹಿತಿಂಡಿಗಳ ವಿನಿಮಯವನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ಈಗ ಈ ನಿಲುವನ್ನು ದೀಪಾವಳಿಯವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ನವದೆಹಲಿಯಿಂದ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಗಡಿಯಾಚೆಗಿನ ಭಯೋತ್ಪಾದನೆ ಮುಂದುವರಿಯುವವರೆಗೆ ಇಂತಹ ಸೌಹಾರ್ದ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆʼʼ ಎಂದು ಅವರು ಹೇಳಿದ್ದಾರೆ.

  ಎರಡೂ ಕಡೆಯವರ ನಡುವೆ ಯಾವುದೇ ಹಸ್ತಲಾಘವ ಮತ್ತು ಸಿಹಿತಿಂಡಿ ವಿನಿಮಯ ನಡೆಯಲಿಲ್ಲ. ಭಯೋತ್ಪಾದನೆಯ ವಿರುದ್ಧ ತಳೆದಿರುವ ನಿಲುವಿಗೆ ಭಾರತ ಎಂದಿಗೂ ಬದ್ದವಾಗಿದೆʼʼ ಎಂದು ಉನ್ನತ ಮೂಲಗಳು ತಿಳಿಸಿವೆ. “ಆಗಸ್ಟ್ 15ರ ನಂತರ ಹೆಚ್ಚುತ್ತಿರುವ ಗಡಿಯಾಚೆಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತ ಸಿಹಿತಿಂಡಿ ವಿತರಣೆನ್ನು ಸ್ಥಗಿತಗೊಳಿಸುವ ನಿಲುವಿಗೆ ಬದ್ಧವಾಗಿದೆʼʼ ಎಂದಿದ್ದಾರೆ.

   ಏಪ್ರಿಲ್‌ 22ರಂದು ಪಹಲ್ಗಾಮ್‌ನ ಬೈಸರನ್‌ ಕಣಿವೆಗೆ ದಾಳಿ ನಡೆಸಿದ ಪಾಕ್‌ ಮೂಲದ ಭಯೋತ್ಪಾದಕರು ಪ್ರವಾಸಿಗರ ಧರ್ಮ ಕೇಳಿ ಮುಸ್ಲಿಮೇತರರನ್ನು ಕೊಲೆ ಮಾಡಿದ್ದರು. ಪತ್ನಿಯರ ಎದುರೇ ಪತಿಯಂದಿರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯು ಪಾಕಿಸ್ತಾನದೊಂದಿಗೆ ತೀವ್ರ ರಾಜತಾಂತ್ರಿಕ ಬಿಕ್ಕಟ್ಟನ್ನು ಹುಟ್ಟುಹಾಕಿತು. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸುತ್ತಿದೆ ಎಂದು ಪದೇ ಪದೆ ಹೇಳುತ್ತಲೇ ಬಂದಿದ್ದ ಭಾರತ ಮತ್ತೆ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಪಡಿಸಿತು. ಜತೆಗೆ ಪಾಕಿಸ್ತಾನದ ಅರ್ಧಕ್ಕಿಂತ ಹೆಚ್ಚು ಭಾಗದ ಕೃಷಿಗೆ ನೀರಾವರಿ ಒದಗಿಸುವ ನಿರ್ಣಾಯಕ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು. ಅಲ್ಲದೆ ಮೇ ಆರಂಭದಲ್ಲಿ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ನಡೆಸಿ ಭಯೋತ್ಪಾಕ ತಾಣಗಳನ್ನು ನಾಶಪಡಿಸಿತು.

Recent Articles

spot_img

Related Stories

Share via
Copy link