ದುಬೈ:
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರವಾಗಿ ಆರಂಭದಿಂದಲೂ ಪಾಕಿಸ್ತಾನ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಲೇ ಇದ್ದು ಈ ಬಾರಿ ಮತ್ತೊಂದು ವಿಚಾರವಾಗಿ ದಾಖಲೆಯೊಂದಿಗೆ ಮುಜುಗರ ಕೂಡ ಅನುಭವಿಸುತ್ತಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಜೊತೆ ಹಗ್ಗಜಗ್ಗಾಟ ನಡೆಸಿದ್ದ ಪಾಕಿಸ್ತಾನ ಕೊನೆಗೂ ಬಿಸಿಸಿಐ ಒತ್ತಡಕ್ಕೆ ಒಳಗಾಗಿ ಹೈಬ್ರೀಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೆ ಒಪ್ಪಿಗೆ ನೀಡಿತ್ತು. ಇದಾದ ಬಳಿಕ ಮೈದಾನಗಳ ಸಿದ್ಧತೆ, ಮೈದಾನಗಳಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸುವ ವಿಚಾರವಾಗಿಯೂ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಭಾರತದ ವಿರುದ್ಧದ ಪಂದ್ಯದ ಕುರಿತಾಗಿಯೂ ಪಾಕಿಸ್ತಾನ ಮುಜುಗರ ಎದುರಿಸುವಂತಾಗಿದೆ.
ಇನ್ನು ಐಸಿಸಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆತಿಥೇಯ ತಂಡವು ತನ್ನದೇ ಪಂದ್ಯಕ್ಕಾಗಿ ಬೇರೊಂದು ದೇಶಕ್ಕೆ ಪ್ರಯಾಣಿಸಿದೆ. ಇಂತಹ ಬೆಳವಣಿಗೆ ಐಸಿಸಿ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುತ್ತಿರುವ ಪಾಕಿಸ್ತಾನ ತನ್ನದೇ ಪಂದ್ಯಕ್ಕಾಗಿ ಇದೀಗ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಪಾಕಿಸ್ತಾನ ಇದೇ ಫೆಬ್ರವರಿ 23ರಂದು ಭಾರತದ ವಿರುದ್ಧ ಪಂದ್ಯವನ್ನಾಡಲಿದ್ದು, ಈ ಪಂದ್ಯಕ್ಕಾಗಿ ಯುಎಇಗೆ ಆಗಮಿಸಿದೆ.
ಈಗಾಗಲೇ ಪಾಕಿಸ್ತಾನ ಯುಎಇಗೆ ಆಗಮಿಸಿದ್ದು ನಾಳೆ ದುಬೈ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ದುಬೈನಲ್ಲಿದ್ದು ಅಭ್ಯಾಸ ನಡೆಸುತ್ತಿವೆ.
ಇನ್ನು ಇದೇ ವಿಚಾರವಾಗಿ ಐಸಿಸಿ ಪ್ಯಾನಲ್ ಅಂಪೈರ್ ರಿಚರ್ಡ್ ಕೆಟಲ್ಬರೋ ಕೂಡ ಟ್ವೀಟ್ ಮಾಡಿದ್ದು, ಐಸಿಸಿ ಇತಿಹಾಸದಲ್ಲೇ ಆತಿಥೇಯ ತಂಡ ತನ್ನದೇ ಪಂದ್ಯಕ್ಕಾಗಿ ಬೇರೊಂದು ದೇಶಕ್ಕೆ ಪ್ರಯಾಣಿಸುತ್ತಿರುವುದು ಇದೇ ಮೊದಲು ಎಂದು ಟ್ವೀಟ್ ಮಾಡಿದ್ದಾರೆ.
