ನವದೆಹಲಿ:
ಆರ್ಥಿಕ ದಿವಾಳಿಯಲ್ಲಿರುವ ಪಾಕಿಸ್ತಾನ ಜಗತ್ತಿನೆದುರು ಭಿಕ್ಷೆ ಬೇಡುತ್ತಿದೆ. ಸಾಲದಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ನೀಡಲಾದ 1 ಬಿಲಿಯನ್ ಡಾಲರ್ (ರೂ. 8,000 ಕೋಟಿಗೂ ಹೆಚ್ಚು) ಬೇಲ್ ಔಟ್ ಪ್ಯಾಕೇಜ್ ಅನ್ನು ನೀಡಿದೆ. ಐಎಂಎಫ್ ತನ್ನ ವಿಸ್ತೃತ ನಿಧಿ ಸೌಲಭ್ಯ (ಇಎಫ್‌ಎಫ್) ಕಾರ್ಯಕ್ರಮದಡಿಯಲ್ಲಿ ಪಾಕಿಸ್ತಾನಕ್ಕೆ ಎರಡು ಕಂತುಗಳಲ್ಲಿ 2.1 ಬಿಲಿಯನ್ ಡಾಲರ್‌ಗಳನ್ನು ವಿತರಿಸಿದೆ. ಇದೀಗ ಭಯೋತ್ಪಾದನೆಗೆ ನೆರವು ನೀಡುವ ಹಣಕಾಸು ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲು ಭಾರತ ಸಜ್ಜಾಗಿದೆ . ಈ ಕುರಿತು ವಿಶ್ವ ಬ್ಯಾಂಕ್ ಜೊತೆ ಭಾರತ ಮಾತುಕತೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಭಾರತವು ವಿಶ್ವಬ್ಯಾಂಕ್ ಮತ್ತು ಭಯೋತ್ಪಾದಕ ಹಣಕಾಸು ಕಣ್ಗಾವಲು ಸಂಸ್ಥೆ, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಅನ್ನು ಸಂಪರ್ಕಿಸಲು ಸಜ್ಜಾಗಿದೆ. ಜೂನ್‌ನಲ್ಲಿ ಪಾಕಿಸ್ತಾನಕ್ಕೆ 20 ಬಿಲಿಯನ್ ಯುಎಸ್ ಡಾಲರ್ ಪ್ಯಾಕೇಜ್‌ಗೆ ಅನುಮೋದನೆ ನೀಡುವ ನಿರೀಕ್ಷೆಯನ್ನು ಮರುಪರಿಶೀಲಿಸುವಂತೆ ಭಾರತ ವಿಶ್ವಬ್ಯಾಂಕ್ ಅನ್ನು ಕೇಳಲಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನವನ್ನು ಮತ್ತೆ ಗ್ರೇ ಲಿಸ್ಟ್‌ಗೆ ಸೇರಿಸಲು ಭಾರತವು FATF ಅನ್ನು ಸಕ್ರಿಯವಾಗಿ ಅನುಸರಿಸಲಿದೆ, ಇದು ಪಾಕಿಸ್ತಾನದ ಹಣಕಾಸು ವಹಿವಾಟುಗಳ ಮೇಲಿನ ಪರಿಶೀಲನೆಯನ್ನು ಹೆಚ್ಚಿಸುತ್ತದೆ, ವಿದೇಶಿ ಹೂಡಿಕೆಗಳು ಮತ್ತು ಬಂಡವಾಳದ ಒಳಹರಿವುಗಳನ್ನು ನಿರ್ಬಂಧಿಸುವ ಸಾಧ್ಯತೆಯಿದೆ.
ಪಾಕಿಸ್ತಾನವನ್ನು ಜೂನ್ 2018 ರಲ್ಲಿ FATF ಗ್ರೇ ಲಿಸ್ಟ್‌ಗೆ ಸೇರಿಸಲಾಗಿದೆ. ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಜೈಲಿಗೆ ಹಾಕಲಾಗಿದೆ ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ಜಗತ್ತಿನೆದುರು ಹೇಳಿದೆ. ಆದರೆ ಇದೀಗ ಕೆಲ ಸ್ಯಾಟ್‌ಲೈಟ್ ಫೋಟೋಗಳು ಪಾಕಿಸ್ತಾನ ನೈಜತೆಯನ್ನು ಬಯಲು ಮಾಡಿದ್ದವು.
ಪಾಕಿಸ್ತಾನ ಮುಖವಾಡ ಕಳೆಚಲು ಭಾರತ ಸರ್ಕಾರ ಸರ್ವ ಪಕ್ಷ ನಿಯೋಗ ಸ್ಥಾಪಿಸಿ ಅದರ ಸದಸ್ಯರನ್ನು 33 ದೇಶಗಳಿಗೆ ಕಳುಹಿಸಿಕೊಡಲಿದೆ. ಈಗಾಗಲೇ ಮೊದಲ ತಂಡ ಜಪಾನ್ ತಲುಪಿದೆ. ಭಾರತದ ವಿರೋಧದ ನಡುವೆಯೇ ಅಂತಾರಾಷ್ಟ್ರೀಯ ಹಣಕಾಸು ನಿಯೋಗ ಬೇಲ್ ಔಟ್ ಪ್ಯಾಕೇಜ್ ಅನ್ನು ಜಾರಿ ಮಾಡಿದೆ. ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡಬಾರದು ಎಂದು ಭಾರತ ಮನವಿ ಮಾಡಿತ್ತು.
ಆದರೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಹಣ ಬಿಡುಗಡೆ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಳೆದ ವಾರ ಪಾಕಿಸ್ತಾನಕ್ಕೆ ನೀಡುವ ನೆರವು “ಭಯೋತ್ಪಾದನೆಗೆ ಪರೋಕ್ಷ ಹಣಕಾಸು ನೆರವು” ಎಂದು ಹೇಳಿದ್ದರು. ಪಾಕಿಸ್ತಾನಕ್ಕೆ ನೀಡುವ ಹಣಕಾಸಿನ ನೆರವಿನ ಬಗ್ಗೆ ಈ ಹಿಂದೆ ಭಾರತ ಅಧಿಕೃತ ಹೇಳಿಕೆಯಲ್ಲಿ ಪ್ರಶ್ನಿಸಿತ್ತು. ಪಾಕಿಸ್ತಾನದ ಆರ್ಥಿಕ ವ್ಯವಹಾರಗಳಲ್ಲಿ ಮಿಲಿಟರಿ ಪಾತ್ರದ ಕುರಿತು ಎಚ್ಚರಿಕೆಯನ್ನೂ ನೀಡಿತ್ತು. ಭಯೋತ್ಪಾದನೆಗೆ ಹಣಕಾಸು ಒದಗಿಸುವ ಅಪಾಯಗಳು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಗೆ ಅದರಿಂದ ಎದುರಾಗಬಹುದಾದ ತೊಂದರೆಗಳ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡಿತ್ತು.
