ಆನೇಕಲ್
ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಧರ್ಮದ ವಿಚಾರಕ್ಕೆ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ಬಂಧಿತನು ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾದಲ್ಲಿ ನೆಲಸಿದ್ದನು.
ಢಾಕಾದಲ್ಲಿ ಓರ್ವ ಯುವತಿಯನ್ನು ವಿವಾಹವಾಗಿದ್ದಾನೆ. ಬಳಿಕ, ಬಂಧಿತ ಪಾಕಿಸ್ತಾನ ಪ್ರಜೆ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ 2014ರಲ್ಲಿ ಅಕ್ರಮವಾಗಿ ದೆಹಲಿಗೆ ಬಂದಿದ್ದಾನೆ. ಅಲ್ಲಿ, ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾನೆ. ನಂತರ, 2018ರಲ್ಲಿ ಕುಟುಂಬ ಸಮೇತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಗೆ ಬಂದು ವಾಸವಾಗಿದ್ದಾನೆ.
ಈತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ಪಾಕಿಸ್ತಾನ ಪ್ರಜೆ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಆಧರಿಸಿ, ಜಿಗಣಿ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕುಟುಂಬ ಸಮೇತ ಪಾಕಿಸ್ತಾನ ಪ್ರಜೆಯನ್ನು ಬಂಧಿಸಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿಗೆ, ಕೇಂದ್ರ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಜಿಗಣಿಯಲ್ಲಿ ವಾಸವಿದ್ದ ಶಂಕಿತ ಉಗ್ರ ಗಿರೀಶ್ ಬೋರಾ ಅಲಿಯಾಸ್ ಗೌತಮ್ ಎಂಬಾತನನ್ನು ಬಂಧಿಸಿದ್ದರು. ಶಂಕಿತ ಉಗ್ರ ಅಸ್ಸಾಂನ ಗುವಾಹಟಿಯಲ್ಲಿ ಐದು ಕಡೆ ಐಇಡಿ ಬಾಂಬ್ ಇಟ್ಟು ಬೆಂಗಳೂರಿನ ಜಿಗಣಿಯಲ್ಲಿ ನೆಲಸಿದ್ದನು. ಶಂಕಿತ ಉಗ್ರ ಅಲ್ಫಾ ಸಂಘಟನೆ ಸೇರಿದವನು ಎಂದು ತಿಳಿದು ಬಂದಿದೆ. ಶಂಕಿತ ಉಗ್ರ ಗಿರೀಶ್ ಕುಟುಂಬ ಸಮೇತ ಜಿಗಣಿಯಲ್ಲಿ ವಾಸವಾಗಿದ್ದನು.