ನವದೆಹಲಿ
ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಹೆಚ್ಚಾಗಿದ್ದು, ಗಡಿಯಾಚೆಯಿಂದ ಪಾಕ್ ಸೇನೆ ನಡೆಸುತ್ತಿರುವ ಗುಂಡಿನ ದಾಳಿಗೆ ಭಾರತೀಯ ಸೇನೆ ಸೂಕ್ತ ತಿರುಗೇಟು ನೀಡುತ್ತಿದೆ. ಇದರ ಪರಿಣಾಮ, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಹಲವಾರು ಪಾಕಿಸ್ತಾನಿ ಸೇನಾ ನೆಲೆಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ. ಗಡಿ ನಿಯಂತ್ರಣ ರೇಖೆಯಾದ್ಯಂತ ಭಾರತೀಯ ವಾಯುಪಡೆ ಕೂಡ ದಾಳಿ ನಡೆಸಿದ್ದು, ಪಾಕಿಸ್ತಾನದ ಮಿಲಿಟರಿ ನೆಲೆ ನಾಶವಾದ ಮೊದಲ ಅಧಿಕೃತ ವಿಡಿಯೋವನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡಿದೆ.
ಭಾರತೀಯ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಪಡೆಗಳು ಹಲವಾರು ಸುತ್ತಿನ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದನ್ನು ಭಾರತೀಯ ಸೇನೆ ವಿಫಲಗೊಳಿಸಿತು. ಅದಾದ ಕೆಲವೇ ಗಂಟೆಗಳ ನಂತರ ಗಡಿಯಾಚೆಗಿನ ಗುಂಡಿನ ದಾಳಿ ಮತ್ತೆ ಆರಂಭವಾಯಿತು. ನಂತರ ಈ ಪ್ರತಿದಾಳಿ ನಡೆದಿದೆ ಎಂದು ಸೇನೆ ತಿಳಿಸಿದೆ. ಪಾಕಿಸ್ತಾನದ ಸೇನಾ ನೆಲೆ ಯಾವ ವಲಯದಲ್ಲಿ ನಾಶವಾಗಿದೆ ಎಂಬುದು ತಿಳಿದಿಲ್ಲ. ಆದರೆ ಭಾರತೀಯ ಸೇನೆಯು ಕದನ ವಿರಾಮ ಉಲ್ಲಂಘನೆಗಳಿಗೆ ಪರಿಣಾಮಕಾರಿ ಪ್ರತ್ಯುತ್ತರ ನೀಡುತ್ತಿದೆ ಎಂಬುದರ ಸಂಕೇತವಾಗಿ ಈ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಪಾಕಿಸ್ತಾನದ ಸಶಸ್ತ್ರ ಪಡೆಗಳು ಮೇ 08 ಮತ್ತು 09 ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿ ಅನೇಕ ದಾಳಿಗಳನ್ನು ನಡೆಸಿದವು. ಪಾಕ್ ಪಡೆಗಳು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಹಲವಾರು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿವೆ’ ಎಂದು ಸೇನೆ ತಿಳಿಸಿದೆ.
ಡ್ರೋನ್ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ ಮತ್ತು ಸೇನೆಯಿಂದ ಕದನ ವಿರಾಮ ಉಲ್ಲಂಘನೆಗಳಿಗೆ ಸೂಕ್ತ ತಿರುಗೇಟು ನೀಡಲಾಗಿದೆ ಎಂದು ಸೇನೆಯ ಪ್ರಕಟಣೆ ಹೇಳಿದೆ.
ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ಪ್ರಯತ್ನಗಳಿಗೆ ತಕ್ಕ ತಿರುಗೇಟು ನೀಡಲಾಗುವುದು ಎಂದು ಸೇನೆ ಹೇಳಿದೆ. ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಗಡಿಯುದ್ದಕ್ಕೂ ಉಗ್ರರ ನುಸುಳುವಿಕೆ ಪ್ರಯತ್ನವನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಿಫಲಗೊಳಿಸಿದೆ.
ಗಡಿ ಪ್ರದೇಶಗಳ ಸಮೀಪವಿರುವ ಅನೇಕ ನಗರಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಶ್ರೀನಗರ, ಜಮ್ಮು ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಹಲವಾರು ಸ್ಥಳಗಳಲ್ಲಿ ರಾತ್ರಿಯಿಡೀ ವಿದ್ಯುತ್ ಕಡಿತಗೊಂಡ ವರದಿಯಾಗಿದೆ.








