ನವದೆಹಲಿ:
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಪಾಕಿಸ್ತಾನಿ ಭಯೋತ್ಪಾದಕ ಹಾಶಿಮ್ ಮೂಸಾ ಒಂದು ಕಾಲದಲ್ಲಿ ಪಾಕಿಸ್ತಾನದ ವಿಶೇಷ ಪಡೆಗಳಲ್ಲಿ ಪ್ಯಾರಾ ಕಮಾಂಡೋ ಆಗಿದ್ದ ಎಂಬ ಶಾಕಿಂಗ್ ಸಂಗತಿಯೊಂದು ಇದೀಗ ಹೊರಬಿದ್ದಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾಯ ಪ್ರಮುಖ ಕಾರ್ಯಕರ್ತನಾಗಿರುವ ಮೂಸಾ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸಿಗರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಕಳುಹಿಸಲಾಗಿತ್ತು.
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಪಾಕಿಸ್ತಾನಿ ಸೇನೆ ಮತ್ತು ISIನ ಕೈವಾಡ ಇರುವುದು ಎನ್‌ಐಎ ತನಿಖೆಯಲ್ಲಿ ಒಂದೊಂದೇ ಬಯಲಾಗುತ್ತಿದೆ. ಭಯೋತ್ಪಾದಕ ಸಂಘಟನೆಗಳು, ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿಯ ನಡುವಿನ ನಿಕಟ ಸಂಬಂಧಗಳ ಕುರಿತು ಭದ್ರತಾ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ. ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಮೂಲದ ಹಾಶಿಮ್ ಮೂಸಾ ಪಾಕಿಸ್ತಾನ ವಿಶೇಷ ಪಡೆಗಳಲ್ಲಿ ಪ್ಯಾರಾ ಕಮಾಂಡೋ ಆಗಿದ್ದ. ವಿಶೇಷ ಸೇವಾ ಗುಂಪು (ಎಸ್‌ಎಸ್‌ಜಿ) ನಂತಹ ಪಾಕಿಸ್ತಾನದ ವಿಶೇಷ ಪಡೆಗಳು ಅವನನ್ನು ಎಲ್‌ಇಟಿಗೆ ನೀಡಿರಬಹುದು ಎಂದಿದ್ದಾರೆ.
ಇನ್ನು ಈ ಮೂಸಾ ಜಮ್ಮು-ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದು, 2024 ರ ಅಕ್ಟೋಬರ್‌ನಲ್ಲಿ ಗಂಡರ್‌ಬಾಲ್‌ನ ಗಗಂಗೀರ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ. ಈ ದಾಳಿಯಲ್ಲಿ ಆರು ಪ್ರವಾಸಿಗರು ಮತ್ತು ವೈದ್ಯರನ್ನು ಹತ್ಯೆ ಮಾಡಲಾಗಿತ್ತು. ಬಾರಾಮುಲ್ಲಾದ ಬುಟಾ ಪತ್ರಿಯಲ್ಲಿ ಯೋಧರನ್ನು ಹತ್ಯೆ ಮಾಡಿದ ಪ್ರಕರಣದಲ್ಲೂ ಮೂಸಾ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ.
