ಶ್ರೀನಗರ
ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಯ ಕೆಲವೇ ಗಂಟೆಗಳಲ್ಲಿ, ಶಂಕಿತ ಭಯೋತ್ಪಾದಕನ ಮೊದಲ ಫೋಟೋ ಬಹಿರಂಗಗೊಂಡಿದೆ. ವೀಡಿಯೊವೊಂದರಲ್ಲಿ ತೆಗೆದ ಸ್ಕ್ರೀನ್‌ಶಾಟ್‌ನಲ್ಲಿ, ಭಯೋತ್ಪಾದಕನೆಂದು ಶಂಕಿಸಲಾದ ವ್ಯಕ್ತಿಯೊಬ್ಬ ಕುರ್ತಾದಲ್ಲಿ ಎಕೆ ಸರಣಿಯ ಅಸಾಲ್ಟ್ ರೈಫಲ್‌ನೊಂದಿಗೆ ಕಾಣಿಸಿಕೊಂಡಿದ್ದಾನೆ. ಭದ್ರತಾ ಸಂಸ್ಥೆಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಲ್ಲಿ ಇವನೂ ಒಬ್ಬ ಎಂದು ಹೇಳಿದ್ದಾರೆ.
ಉಗ್ರರು ಕೆಲವರು ಸ್ಥಳೀಯರಂತೆ ಕುರ್ತಾ ಧರಿಸಿ ಬಂದರೆ, ಪ್ರತ್ಯಕ್ಷ ದರ್ಶಿಗಳು ಹೇಳಿರುವಂತೆ ಕೆಲವರು ಸ್ಥಳೀಯ ಪೊಲೀಸರ ಸಮವಸ್ತ್ರ ಧರಿಸಿ ಬಂದಿದ್ದ ಕಾರಣ, ಪ್ರವಾಸಿಗರಿಗೆ ಅವರು ಭಯೋತ್ಪಾದಕರೆಂದು ತಿಳಿಯಲಿಲ್ಲ.ಮಂಗಳವಾರ ಮಧ್ಯಾಹ್ನ ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ಜನಪ್ರಿಯ ಪ್ರವಾಸಿ ತಾಣದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಹತ್ಯೆ ಮಾಡಿದ್ದಾರೆ. ಅವರಲ್ಲಿ ಹೆಚ್ಚಿನವರು ಇತರ ರಾಜ್ಯಗಳಿಂದ ಬಂದವರು.
2019 ರಲ್ಲಿ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಆ ದಾಳಿಯಲ್ಲಿ 40 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. 26 ಬಲಿಯಾದವರಲ್ಲಿ ಯುಎಇ ಮತ್ತು ನೇಪಾಳದ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸುಮಾರು 8-10 ಭಯೋತ್ಪಾದಕರು ಭಾಗಿಯಾಗಿರುವ ಸಾಧ್ಯತೆಯಿದೆ. ಅವರಲ್ಲಿ 5-7 ಭಯೋತ್ಪಾದಕರು ಪಾಕಿಸ್ತಾನದವರಾಗಿರಬಹುದು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೌದಿ ಅರೇಬಿಯಾ ಭೇಟಿಯನ್ನು ಮೊಟಕುಗೊಳಿಸಿ ಇಂದು ಬೆಳಗ್ಗೆ ನವದೆಹಲಿಗೆ ಆಗಮಿಸಿದರು. ಅವರು ಬಂದ ತಕ್ಷಣ, ಪ್ರಧಾನಿ ಮೋದಿ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರೊಂದಿಗೆ ಪರಿಸ್ಥಿತಿಯ ಕುರಿತು ಚರ್ಚಿಸಲು ಸಂಕ್ಷಿಪ್ತ ಸಭೆ ನಡೆಸಿದರು.
ಪುರುಷರ ಪ್ಯಾಂಟ್ ಬಚ್ಚಿಸಿ ಅವರು ಹಿಂದೂಗಳೋ ಇಲ್ಲವೋ ಎಂದು ಖಚಿತಪಡಿಸಿಕೊಂಡು ಕೇವಲ ಹಿಂದೂಗಳನ್ನು ಮಾತ್ರ ಟಾರ್ಗೆಟ್ ಮಾಡಲಾಗಿತ್ತು. ಶಸ್ತ್ರಾಸ್ತ್ರಗಳನ್ನು ಹಿಡಿದು ಪಠಾಣ್ ಸೂಟ್ ಧರಿಸಿರುವ ವ್ಯಕ್ತಿಯೊಬ್ಬ ವಿಡಿಯೋದಲ್ಲಿ ಸೆರೆಯಾಗಿದ್ದಾನೆ. ಈ ಫೋಟೋವನ್ನು ನಿನ್ನೆ ತಡರಾತ್ರಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್ ಮತ್ತು ಸೇನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೊ ಇದ್ದಾಗಿದ್ದು, ಈ ಫೋಟೊವನ್ನು ಟಿವಿ9 ಖಚಿತಪಡಿಸುವುದಿಲ್ಲ.
