ತುಮಕೂರು : ಸಿದ್ಧಗಂಗಾ ಮಠ ತಲುಪಿ ಪಂಚಮಸಾಲಿ ಪಾದಯಾತ್ರೆ

ತುಮಕೂರು : 

     ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಕೈಗೊಂಡಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ಪಾದಯಾತ್ರೆಯು ಬೆಳ್ಳಾವಿ ಕ್ರಾಸ್‍ನಿಂದ ಕೋರಾ, ಊರುಕೆರೆ ಮೂಲಕ ಸಿದ್ದಗಂಗಾ ಮಠ ತಲುಪಿ ವಾಸ್ತವ್ಯ ಹೂಡಿದರು.

      ಬೆಳ್ಳಾವಿ ಕ್ರಾಸ್‍ನಿಂದ ಕೋರಾ, ಊರುಕೆರೆ ಬಳಿಗೆ ಬಂದ ಪಾದಯಾತ್ರೆಯನ್ನು ಸ್ವಾಗತಿಸಿದ ಸಮುದಾಯದ ಮುಖಂಡರು ಪಾದಯಾತ್ರೆಗೆ ಸಾಥ್ ನೀಡಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ಜ. 9 ರಂದು ಸಿದ್ದಗಂಗೆಯ ಶ್ರೀಗಳ ಆಶೀರ್ವಾದ ಪಡೆದು ಪಾದಯಾತ್ರೆ ಆರಂಭಿಸಿದ್ದೆವು. ಇಂದು ಮತ್ತೆ ಪಾದಯಾತ್ರೆ ಮೂಲಕ ಶ್ರೀಮಠದಲ್ಲಿ ವಾಸ್ತವ್ಯ ಹೂಡುತ್ತಿರುವುದು ಸಂತಸ ತಂದಿದೆ.
ಶನಿವಾರ ವೀರಶೈವ ಮಠಾಧೀಶರು ಒಬಿಸಿ ಹಕ್ಕೋತ್ತಾಯ ಸಭೆ ನಡೆಸುತ್ತಿದ್ದಾರೆ. ಈ ಸಭೆಯನ್ನು ಸ್ವಾಗತ ಮಾಡುತ್ತೇನೆ ಎಂದರು.

      ಪಂಚಮಸಾಲಿ ಮೀಸಲಾತಿ ಕೇಳುತ್ತಿರುವುದರಿಂದ ಯಾರೂ ಸಹ ಹತ್ತಿಕ್ಕುವ ದುರುದ್ದೇಶ ಕೆಲಸ ಮಾಡಬಾರದು. 500 ಜನ ಮಠಾಧೀಶರು ಸಭೆ ಮಾಡುತ್ತಿದ್ದು, ಆ ಮಠಗಳಿಗೆ ದವಸ ಧಾನ್ಯ ಕೊಡುವ ಕೆಲಸವನ್ನ ಪಂಚಮಸಾಲಿಗಳು ಮಾಡಿದ್ದಾರೆ ಎಂದರು.
ಪಾದಯಾತ್ರೆಯು ಇಂದು 602 ಕಿ.ಮೀ. ಕ್ರಮಿಸಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಟ್ಟು ಪಾದಯಾತ್ರೆ ಮಾಡುತ್ತಿದ್ದೇವೆ. ಮುಂದಿನ ಹೆಜ್ಜೆ ಬಹಳ ಕಠಿಣವಾಗಲಿದೆ. ಫೆ. 21 ರಂದು ಪಂಚಮಸಾಲಿ ಮೀಸಲಾತಿ ಹಕ್ಕೋತ್ತಾಯದ ಮಹಾರ್ಯಾ ಲಿ ಸಮಾವೇಶ ನಡೆಯಲಿದ್ದು, ಅಂದು ಸಂಜೆ 4 ಗಂಟೆಯೊಳಗಾಗಿ ಮುಖ್ಯಮಂತ್ರಿಗಳು ವರದಿಯನ್ನು ತರಿಸಿಕೊಳ್ಳದಿದ್ದರೆ ಅಂದು ಸಂಜೆಯಿಂದಲೇ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದರು.

     ಬಜೆಟ್ ಅಧಿವೇಶನದ ನಂತರವೂ ಮೀಸಲಾತಿ ಘೋಷಣೆ ಮಾಡದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಅವರು ಹೇಳಿದರು. ಮೀಸಲಾತಿ ಪ್ರಮಾಣ ಪತ್ರವನ್ನು ಪಡೆಯದ ಹೊರತು ಊರಿಗೆ ವಾಪಸ್ಸಾಗುವುದಿಲ್ಲ. ಫೆ. 21 ರೊಳಗಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ನಮಗೆ ಮೀಸಲಾತಿ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

      ಸಮಾವೇಶ ನಡೆಸುವ ಜಾಗದ ಬಗ್ಗೆ ಬಸವನಗೌಡ ಪಾಟೀಲ್ ಯತ್ನಾಳ್, ವಿಜಯ ಕಾಶಂಪುರ್ ಹಾಗೂ ಉಭಯ ಸಚಿವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

      ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಭೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಜಯಕಾಶಂಪೂರ್, ಜ. 14 ರಂದು 2ಎ ಮೀಸಲಾತಿಗಾಗಿ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿದ್ದು, ತುಮಕೂರಿಗೆ ಬಂದು ತಲುಪಿದ್ದೇವೆ. ಸಿದ್ದಗಂಗಾ ಮಠದಿಂದ ಬೆಂಗಳೂರಿನತ್ತ ತೆರಳಲಿದ್ದೇವೆ ಎಂದರು.

      ಪಾದಯಾತ್ರೆ ಕಷ್ಟದಾಯಕವಾಗಿದ್ದರೂ ಸಹ ಶ್ರೀಗಳು, ವಿದ್ಯಾರ್ಥಿಗಳು, ತಾಯಂದಿರು ಯಾರೂ ಎದೆಗುಂದದೆ ಪಾಲ್ಗೊಂಡಿದ್ದಾರೆ. ಹರಿಹರದ ವಚನಾನಂದ ಸ್ವಾಮೀಜಿಯವರು ಸಹ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಾಥ್ ನೀಡಿದ್ದಾರೆ ಎಂದರು. ಪಂಚಮಸಾಲಿ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವ ಸಂಬಂಧ ಈಗಾಗಲೇ ಶ್ರೀಗಳ ನೇತೃತ್ವದಲ್ಲಿ ಹಲವು ಬಾರಿ ಹೋರಾಟ ಮಾಡಿದ್ದೇವೆ ಎಂದರು.

     ಅ. 28 ರಂದು ಉಪವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ರಮೇಶ್ ಜಾರಕಿಹೊಳಿ ಅವರು ಶ್ರೀಗಳ ಬಳಿ ಬಂದು ನ. 28 ರೊಳಗಾಗಿ ಮೀಸಲಾತಿ ಕೊಡಿಸುತ್ತೇವೆ, ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ಮನವಿ ಮಾಡಿದ್ದರು. ಸಚಿವರುಗಳ ಭರವಸೆ ಮೇರೆಗೆ ಉಪವಾಸ ಸತ್ಯಾಗ್ರಹ ಕೈ ಬಿಡಲಾಗಿತ್ತು. ಆದರೆ ಇದುವರೆಗೂ ಯಾವುದೇ ರೀತಿಯ ಮೀಸಲಾತಿ ದೊರೆತಿಲ್ಲ ಎಂದರು.
ರಾಜ್ಯದಲ್ಲಿ 1 ಕೋಟಿ 20 ಲಕ್ಷ ಜನಸಂಖ್ಯೆಯನ್ನು ನಮ್ಮ ಸಮುದಾಯ ಹೊಂದಿದೆ. ಸುಮಾರು 10 ಲಕ್ಷ ಜನರೊಂದಿಗೆ ಪಾದಯಾತ್ರೆಯಲ್ಲಿ ಬಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದೆವು ಎಂದು ಅವರು ಹೇಳಿದರು.

     ಫೆ. 21 ರ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಮೀಸಲಾತಿ ಘೋಷಣೆ ಮಾಡದಿದ್ದರೆ ವಿಧಾನಸೌಧದ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಅವರು ಹೇಳಿದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಅವರು ದೂರಿದರು.

ಈ ಸಂದರ್ಭದಲ್ಲಿ ಹರಿಹರದ ಶ್ರೀ ವಚನಾನಂದ ಸ್ವಾಮೀಜಿ, ವಿಜಯಕುಮಾರ್ ಪೂಜಾರಿ, ಅಂಬರೀಶ್ ನಾಗೂರು, ಬಸವನಗೌಡ ತೊಂಡಿಹಾಲ್, ವಿರಾಜ್ ಪಾಟೀಲ್, ಪ್ರಭಾಕರಗೌಡ, ಶಂಕರಗೌಡ ಬಿರಾದರ್ ಮತ್ತಿತರರು ಉಪಸ್ಥಿತರಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap