ಇಂದು- ನಾಳೆ ವೀರಶೈವ ಲಿಂಗಾಯತ ಪಂಚಪೀಠಗಳ ಶೃಂಗ ಸಭೆ

ದಾವಣಗೆರೆ:

   ಕರ್ನಾಟಕದ ಪ್ರಬಲ ಸಮುದಾಯಗಳಲ್ಲಿ ಒಂದಾದ ವೀರಶೈವ ಲಿಂಗಾಯತ  ಸಮುದಾಯದ ಪಂಚಪೀಠಗಳು ಒಂದಾಗಿದ್ದು, ಇಂದು ಮತ್ತು ನಾಳೆ  ದಾವಣಗೆರೆಯಲ್ಲಿ  ಶೃಂಗ ಸಮ್ಮೇಳನ ನಡೆಯಲಿದೆ. 40 ವರ್ಷಗಳ ನಂತರ ಮತ್ತೆ ಶೃಂಗ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಇಂದು ಮತ್ತು ನಾಳೆ ದಾವಣಗೆರೆ ರೇಣುಕಾ ಮಂದಿರದಲ್ಲಿ ಎರಡು ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಇದರಲ್ಲಿ ಪಂಚ ಪೀಠಗಳಾದ ರಂಭಾಪುರಿ ಪೀಠ, ಉಜ್ಜಯಿನಿ ಪೀಠ, ಕೇದರ ಪೀಠ, ಶ್ರೀ ಶೈಲ ಪೀಠ ಹಾಗೂ ಕಾಶಿ ಪೀಠದ ಪೀಠಾಧೀಶರು ಒಂದಾಗಲಿದ್ದಾರೆ.

    ಕಾರ್ಯಕ್ರಮವನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಗುವುದು. ಕೇಂದ್ರ ಸಚಿವರಾದ ವಿ.ಸೋಮಣ್ಣ, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷರು ಮತ್ತು ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

   ಜಾತಿಗಣತಿ ವರದಿಯಲ್ಲಿ ಲಿಂಗಾಯತ ವೀರಶೈವರ ಸಂಖ್ಯೆ ಅತಿ ಕಡಿಮೆ ಹೊರಹೊಮ್ಮಿದುದರಿಂದ ಸಮುದಾಯದಲ್ಲಿ ಅಸಮಾಧಾನ ಮೂಡಿತ್ತು. ರಾಜ್ಯ ಸರ್ಕಾರದ ವಿರುದ್ದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಹಲವು ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಕೇಂದ್ರ ನಡೆಸಲಿರುವ ಜನಗಣತಿ ಹಾಗೂ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಒಂದು ಮಾಡುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

   ಈ ಹಿಂದೆ ಪಂಚ ಪೀಠಾಧೀಶರು ಒಟ್ಟಾಗಿ ಬಂದ ಉದಾಹರಣೆಗಳು ಕಡಿಮೆ. ಆದರೆ ಸಮುದಾಯದ ಹಿತಾಸಕ್ತಿಗಾಗಿ ಅವರನ್ನು ಒಟ್ಟು ತರಲಾಗಿದೆ ಎನ್ನಲಾಗಿದೆ. ವೀರಶೈವರ ಶಕ್ತಿ ಪ್ರದರ್ಶನ ಕೂಡ ಇದಾಗಿದ್ದು, ಜಾತಿ ಗಣತಿ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ. ಮುಂದೆ ಇನ್ನೂ ದೊಡ್ಡ ಮಟ್ಟದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು‌‌ ಸೇರಿಸಿ ಬೃಹತ್ ಸಮಾವೇಶ ಆಯೋಜಿಸುವ ಚಿಂತನೆ ಕೂಡ ಇದೆ ಎನ್ನಲಾಗಿದೆ.

   ವೀರಶೈವ ಸಮುದಾಯದ ಪಂಚಪೀಠಗಳಾದ ವೀರಶೈವ ಸಮಾಜದ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶೈಲ ಮತ್ತು ಶ್ರೀ ಕಾಶಿ ಪಂಚ ಪೀಠಗಳು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಒಂದಾಗಲಿವೆ. ಶೃಂಗ ಸಮ್ಮೇಳನದಲ್ಲಿ ಜಾತಿ ಜನಗಣತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

Recent Articles

spot_img

Related Stories

Share via
Copy link