ಪಾಂಡಿಯನ್‌ ನನ್ನ ಉತ್ತರಾಧಿಕಾರಿಯಲ್ಲ : ನವೀನ್‌ ಪಟ್ನಾಯಕ್‌

ಭುವನೇಶ್ವರ:

    ತಮಿಳುನಾಡು ಮೂಲದ ಮಾಜಿ ಐಎಎಸ್ ಅಧಿಕಾರಿ, ರಾಜಕಾರಣಿ ವಿ.ಕೆ.ಪಾಂಡಿಯನ್ ಅವರನ್ನು ಗುರಿಯಾಗಿಸಿಕೊಂಡು ಒಡಿಯಾ ಅಸ್ಮಿತೆ(ಒಡಿಯಾ ಪ್ರೈಡ್)ಯನ್ನು ಬಿಜೆಪಿ ಪ್ರಮುಖ ಪ್ರಚಾರ ವಿಷಯವನ್ನಾಗಿ ಮಾಡಿಕೊಂಡಿದೆ. ಆದರೆ ಅವರು(ಪಾಂಡಿಯನ್) ನನ್ನ ಉತ್ತರಾಧಿಕಾರಿಯಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

   ತಮ್ಮ ಉತ್ತರಾಧಿಕಾರಿಯನ್ನು ರಾಜ್ಯದ ಜನರು ನಿರ್ಧರಿಸುತ್ತಾರೆ ಎಂದು ನವೀನ್ ಪಟ್ನಾಯಕ್ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

   ತಮ್ಮ ನಿಕಟವರ್ತಿ ವಿಕೆ ಪಾಂಡಿಯನ್ ಅವರು ಗೇಟ್‌ಕೀಪರ್ ಆಗಿ ಕಾರ್ಯನಿರ್ವಹಿಸುತ್ತಾರೆಯೇ ಅಥವಾ ತಮ್ಮ ಪರವಾಗಿ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಟ್ನಾಯಕ್, “ಇದು ಹಾಸ್ಯಾಸ್ಪದ ಮತ್ತು ನಾನು ಈ ಹಿಂದೆಯೂ ಹೇಳಿದ್ದೇನೆ. ಇದು ಹಳೆಯ ಆರೋಪ ಮತ್ತು ಅದರಲ್ಲಿ ಯಾವುದೇ ಹುರುಳಿಲ್ಲ” ಎಂದಿದ್ದಾರೆ.

   BJD ನಾಯಕ ಪಾಂಡಿಯನ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂಬ ಮಾತುಗಳು ಉತ್ಪ್ರೇಕ್ಷಿತ ಮತ್ತು ದುರದೃಷ್ಟಕರ. “ನಾನು ಈ ಉತ್ಪ್ರೇಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಒಡಿಶಾ ಸಿಎಂ ಹೇಳಿದ್ದಾರೆ.

   ಬಿಜೆಪಿ ತಮ್ಮ ನಿಕಟವರ್ತಿಯ ವಿರುದ್ಧ ಮಾಡುವತ್ತಿರುವ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಒಡಿಶಾ ಸಿಎಂ, ಬಿಜೆಪಿ ಹತಾಶೆಯಿಂದ ಇಂತಹ ಆರೋಪಗಳನ್ನು ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

   “ಅವರು ಹೆಚ್ಚು ಹೆಚ್ಚು ಹತಾಶರಾಗುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಅದರಲ್ಲೂ ವಿಶೇಷವಾಗಿ ದೇಶದಲ್ಲಿ ಅವರ ಜನಪ್ರಿಯತೆ ಕ್ಷೀಣಿಸುತ್ತಿದೆ” ಎಂದು ಪಟ್ನಾಯಕ್ ಪ್ರತಿಪಾದಿಸಿದ್ದಾರೆ.

   ನಮ್ಮಲ್ಲಿ ಉತ್ತರಾಧಿಕಾರಿ ಯೋಜನೆ ಇಲ್ಲ ಎಂದು ಹೇಳಿದ ನವೀನ್ ಪಟ್ನಾಯಕ್, ರಾಜಕೀಯ ಪಕ್ಷಗಳಲ್ಲಿ ಜನರು ಈ ವಿಷಯಗಳನ್ನು ನಿರ್ಧರಿಸುತ್ತಾರೆ. ಉತ್ತರಾಧಿಕಾರಿಯನ್ನು ರಾಜ್ಯದ ಜನರು ನಿರ್ಧರಿಸುತ್ತಾರೆ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ ಎಂದು ಒಡಿಶಾ ಸಿಎಂ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ